ಹಾಸನ: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ತಯಾರಿಯ ನಡುವೆ ಕಾಂಗ್ರೆಸ್ ಪಕ್ಷದಿಂದ ಆಪರೇಷನ್ ಹಸ್ತ, ಬಿಜೆಪಿಯಿಂದ ಆಪರೇಷನ್ ಕಮಲದ ಆತಂಕವೂ ಇದೆ. ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಶಾಸಕರನ್ನು ಉಳಿಸಿಕೊಳ್ಳುವುದಕ್ಕಾಗಿ ಹಾಸನದಲ್ಲಿ ಪ್ಲ್ಯಾನ್ ಮಾಡಿದ್ದಾರೆ.
ಆಪರೇಷನ್ ಹಸ್ತಕ್ಕೆ ಬಲಿಯಾಗದಂತೆ ಕಾಪಾಡಿಕೊಳ್ಳಲು ಹಾಸನಾಂಬೆಯ ಮೊರೆ ಹೋಗಿದ್ದಾರೆ. ಹಾಸನಾಂಬೆಯ ಸನ್ನಿಧಿಯಲ್ಲಿ ಪಕ್ಷ ಬಿಟ್ಟು ಹೋಗಲ್ಲ ಅಂತ ಶಾಸಕರು ಭರವಸೆ ನೀಡಿದ್ದಾರೆ. ಹಾಸನಾಂಬೆಯ ದರ್ಶನಕ್ಕೆ ಬಂದಿದ್ದ ಜೆಡಿಎಸ್ ಶಾಸಕರು, ಎರಡು ದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ತಮ್ಮ 17 ಶಾಸಕರೊಂದಿಗೆ ಕುಮಾರಸ್ವಾಮಿ ಸಭೆ ಕೂಡ ನಡೆಸಿದ್ದರು. ಸಭೆಯಲ್ಲಿ ಪಕ್ಷ ತೊರೆಯದಂತೆ ಸೂಚನೆ ನೀಡಿದ್ದರು. ಈ ಸೂಚನೆ ಬೆನ್ನಲ್ಲೇ ಶಾಸಕರು ಕೂಡ ಭರವಸೆ ನೀಡಿದ್ದರು.
ಬಿಜೆಪಿ ಜೊತೆಗೆ ಈ ಬಾರಿ ಮೈತ್ರಿ ಮಾಡಿಕೊಳ್ಳುತ್ತಿರುವುದು ಸಾಕಷ್ಟು ಕಾರ್ಯಜರ್ತರಿಗೆ ಇಷ್ಟವಾಗುತ್ತಿಲ್ಲ. ಮನಸ್ತಾಪಗಳು ಹೆಚ್ಚಾಗಿದೆ. ಇದೆ ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಯಾಕೆ ಅನಿವಾರ್ಯ ಅನ್ನುವುದುನ್ನು ಕುಮಾರಸ್ವಾಮಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಕಾಂಗ್ರೆಸ್ ನಾಯಕರ ಆಮಿಷಕ್ಕೆ ಒಳಗಾಗಬೇಡಿ ಎಂದು ಕುಮಾರಸ್ವಾಮಿ ಬುದ್ದಿ ಹೇಳಿದ್ದಾರೆ. ಕುಮಾರಸ್ವಾಮಿ ಅವರ ಮಾತಿನ ಬಳಿಕ, ಶಾಸಕರೆಲ್ಲ ಆಣೆ – ಪ್ರಮಾಣ ಮಾಡಿದ್ದಾರೆ. ಹಾಸನಾಂಬೆಯ ಮೇಲೆ ಪ್ರಮಾಣ ಮಾಡಿ, ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ ಎಂಬುದನ್ನು ಹೇಳಿದ್ದಾರೆ. ಈ ಮೂಲಕ ಆಪರೇಷನ್ ಹಸ್ತಕ್ಕೆ ನಮ್ಮ ಶಾಸಕರು ಮರುಳಾಗಲ್ಲ ಎಂಬ ಭರವಸೆ ಕುಮಾರಸ್ವಾಮಿ ಅವರಿಗೂ ಬಂದಂತೆ ಕಾಣುತ್ತಿದೆ.