ಸುದ್ದಿಒನ್, ಚಿತ್ರದುರ್ಗ, ನವಂಬರ್.08 : ಜಿಲ್ಲೆಯಲ್ಲಿ ವಿಶಾಖ ಮಳೆ ಆರ್ಭಟ ಜೋರಾಗಿದೆ. ಬಿಸಿಲಿಗೆ ತತ್ತರಿಸಿದ್ದ ಜನತೆಗೆ ಚಿತ್ರದುರ್ಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ತಂಪೆರದಿದೆ. ಬುಧವಾರ ಸಂಜೆಯಿಂದ ಭರ್ಜರಿ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನ ಸ್ವಲ್ಪ ಮಳೆಯಾಗಿತ್ತು. ಆದರೆ ಬುಧವಾರ ಸಂಜೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ರಾತ್ರಿ 8 ಗಂಟೆಯಾದರೂ ಮಳೆ ಸುರಿಯುತ್ತಲೇ ಇತ್ತು.
ಈ ವಿಶಾಖ ಮಳೆಯು ಈ ತಿಂಗಳು ಮೂರನೇ ತಾರೀಖಿನಂದ ಆರಂಭವಾಗಿ ಮುಂದಿನ ಹತ್ತು ದಿನಗಳ ಕಾಲ ಸುರಿಯುವ ಸಾಧ್ಯತೆಯಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಚರಂಡಿಯಲ್ಲಿ ಪ್ರವಾಹದಂತೆ ನೀರು ಹರಿಯುತ್ತಿತ್ತು. ರಸ್ತೆಯಲ್ಲಿನ ಗುಂಡಿಯಲ್ಲಿ ನೀರು ತುಂಬಿಕೊಂಡು ಕೆಲವೆಡೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ನಗರದ ಗಾಂಧಿ ವೃತ್ತದ ಬಳಿಯ ಬೀದಿಬದಿಯ ವ್ಯಾಪಾರಿಗಳು ಪರದಾಡಿದರು.
ನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬಳಿ, ರೈಲ್ವೆ ಕೆಳಸೇತುವೆ ಕೆಳಗೆ, ತುರುವನೂರಿಗೆ ಹೋಗುವ ರಸ್ತೆಯ ಕೆಳಸೇತುವೆ ಸೇರಿದಂತೆ ಹಲವೆಡೆ ನೀರು ನಿಂತಿದ್ದು ವಾಹನ ಸವಾರರು ಪರದಾಡುವಂತಾಯಿತು.
ಮಳೆಯೇ ಇಲ್ಲದೇ ಕಂಗಾಲಾಗಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಹಿಂಗಾರು ಮಳೆಯಿಂದ ಅನುಕೂಲವಾಗಿದ್ದರೆ, ಈಗಾಗಲೇ ಕೊಯಿಲಿಗೆ ಬಂದಿರುವ ರಾಗಿ, ಶೇಂಗಾ, ಮೆಕ್ಕೆಜೋಳ ಬೆಳೆ ನೆಲಕಚ್ಚುವ ಭೀತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಕಡಲೆ, ಬಿಳಿ ಕುಸುಮೆ, ಸೂರ್ಯಕಾಂತಿ ಹಾಗೂ ಜೋಳದಂತಹ ಕೃಷಿ ಬೆಳೆಗಳನ್ನು ಬಿತ್ತನೆ ಮಾಡುವ ರೈತರಿಗೆ ಈ ಮಳೆ ಅನುಕೂಲವಾಗಲಿದೆ. ಮುಂಗಾರು ಹಂಗಾಮು ಇಲ್ಲದೆ ನಿರಾಶನಾಗಿದ್ದ ರೈತನಿಗೆ ಹಿಂಗಾರು ಮಳೆ ಭರವಸೆ ಮೂಡಿಸಿದೆ.
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು,
ಮಂಗಳವಾರ ಸುರಿದ ಮಳೆ ವಿವರದನ್ವಯ ಜಿಲ್ಲೆಯ ಹೊಸದುರ್ಗದಲ್ಲಿ 26.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ 4.3 ಮಿ.ಮೀ, ಮತ್ತೋಡಿನಲ್ಲಿ 6.3 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 2.4 ಮಿ.ಮೀ, ರಾಮಗಿರಿ 24.4 ಮಿ.ಮೀ ಮಳೆಯಾಗಿದೆ.
24 ಮನೆಗಳು ಭಾಗಶಃ ಹಾನಿ: ಮಂಗಳವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 24 ಮನೆಗಳು ಭಾಗಶಃ ಹಾನಿಯಾಗಿದ್ದು, 1 ಸಣ್ಣ ಜಾನುವಾರು ಹಾನಿಯಾಗಿದೆ.
ಹೊಸದುರ್ಗ ತಾಲ್ಲೂಕಿನಲ್ಲಿ 17 ಮನೆಗಳು ಭಾಗಶಃ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 5 ಮನೆಗಳು ಭಾಗಶಃ ಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.