ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್.08 : ರೈತರ ಪಾಲಿನ ಆಧುನಿಕ ಭಗೀರಥ ಅಂತರ್ಜಲ ಮಟ್ಟ ಹೆಚ್ಚಿಸಲು ಅವಿರತ ಶ್ರಮಿಸುತ್ತಿರುವ ಜನಪ್ರಿಯ ಜಲ ವಿಜ್ಞಾನಿ ಮಳೆ ನೀರು ಕೊಯ್ಲು ತಜ್ಞ ಎನ್.ಜೆ.ದೇವರಾಜರೆಡ್ಡಿಯವರು ಚಂದನ ವಾಹಿನಿಯಲ್ಲಿ ಈ ವಾರದ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನವೆಂಬರ್ 10 ರಂದು ರಾತ್ರಿ 8 ಕ್ಕೆ ಪ್ರಸಾರವಾಗಲಿದೆ. ಮರು ಪ್ರಸಾರವನ್ನು ನವೆಂಬರ್ 12 ರಂದು ರಾತ್ರಿ ಎಂಟು ಗಂಟೆಗೆ ವೀಕ್ಷಿಸಬಹುದಾಗಿದೆ.
ಕಳೆದ 37 ವರ್ಷಗಳಿಂದಲೂ ಜಲ ಸಂರಕ್ಷಣೆಯಲ್ಲಿ ತೊಡಗಿರುವ ಎನ್.ಜೆ.ದೇವರಾಜರೆಡ್ಡಿ ಒಂದು ಲಕ್ಷಕ್ಕೂ ಅಧಿಕ ಬೋರ್‍ವೆಲ್‍ಗಳನ್ನು ಕೊರೆಸಿ ಜಲ ಯೋಧ ಎನ್ನುವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇವರ ಜಲ ಕಾಳಜಿಯನ್ನು ಗುರುತಿಸಿ ಹತ್ತು ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ.
ಕೃಷಿ ಭೂಮಿಯಲ್ಲಿ ಎಲೆ ಬಳ್ಳಿ ಒಣಗುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಾರೆ ಕಂಡ ಎನ್.ಜೆ.ದೇವರಾಜರೆಡ್ಡಿಗೆ ಬರದ ದಿನಗಳು ದೊಡ್ಡ ಪಾಠ ಕಲಿಸಿವೆ. ನದಿ, ಕೆರೆಗಳು ಕಲುಷಿತಗೊಂಡು ಅಂತರ್ಜಲ ಬರಿದಾಗಿರುವ ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಭೂಮಿ ಮೇಲೆ ಶುದ್ದವಾಗಿರುವುದೆಂದರೆ ಮಳೆ ನೀರು ಮಾತ್ರ ಎನ್ನುವ ಜಾಗೃತಿಯನ್ನು ಜನತೆಯಲ್ಲಿ ಮೂಡಿಸುತ್ತಿದ್ದಾರೆ.
ಜಲಸಂರಕ್ಷಣೆಗಾಗಿಯೇ ಜೀವನ ಮುಡುಪಾಗಿಟ್ಟಿರುವ ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಕೊಳವೆ ಬಾವಿ ಎಲ್ಲಿದೆಯೋ ಅಲ್ಲಿದೆ ಆರೋಗ್ಯ ಎನ್ನುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತು.
ಚಿತ್ರದುರ್ಗದ ಕೋಟೆಯಲ್ಲಿದ್ದ ಒಂದು ಲಕ್ಷ ಸೈನಿಕರಿಗೆ ಮಳೆ ನೀರು ಆಶ್ರಯವಾಗಿತ್ತು. ಈಗ ಎಷ್ಟು ಬೋರ್ ಕೊರೆಸಿದರೂ ನೀರು ಸಾಕಾಗುತ್ತಿಲ್ಲ. ಲಕ್ಷಾಂತರ ಬೋರ್‍ವೆಲ್‍ಗಳನ್ನು ಕೊರೆಸಿರುವ ಪಾಪ ಪ್ರಜ್ಞೆ ನನ್ನನ್ನು ಕಾಡುತ್ತಿದೆ ಎನ್ನುವ ಎನ್.ಜೆ.ದೇವರಾಜರೆಡ್ಡಿರವರ ಮನದಾಳದ ಆತಂಕವನ್ನು ನೆಚ್ಚಿನ ಚಂದನ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ.