ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ. ನ.07 : ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಜಿಲ್ಲಾ ಆಸ್ಪತ್ರೆಯ ಎಲ್ಲಾ ವಿಭಾಗಗಳಲ್ಲಿಯೂ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಔಷಧಿ ಪೂರೈಕೆ ಹಾಗೂ ಚಿಕಿತ್ಸಾ ಸೇವೆ ಕುರಿತು ಯಾವುದೇ ಸಮಸ್ಯೆಗಳಿದ್ದಲ್ಲಿ, ಸಾರ್ವಜನಿಕರು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದ ಬಿ.ಸಿ.ರಾಯ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಆಸ್ಪತ್ರೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರು ಆಸ್ಪತ್ರೆಗೆ ಭೇಟಿ ನೀಡುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ ತರಬೇಕು. ಆಯುಷ್ಮಾನ್, ಎಬಿಎಆರ್‍ಕೆ ಅಡಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದ ಅವರು, ಯಾವುದೇ ಕಾರಣಕ್ಕೂ ವೈದ್ಯರಿಗೆ ಹಾಗೂ ಶುಶ್ರೂಷಕರಿಗೆ ಹಣ ನೀಡಬಾರದು. ಯಾವುದೇ ದೂರಗಳಿದ್ದರೆ ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಬೆಳಿಗ್ಗೆ 9 ಗಂಟೆಯೊಳಗೆ ರೋಗಿಗಳ ಭೇಟಿ ಮಾಡಿ: ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಬೆಳಿಗ್ಗೆ 9 ಗಂಟೆಯೊಳಗೆ ಭೇಟಿ ಮಾಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಸಾರ್ವಜನಿಕರಿಗೆ ಮನವಿ ಮಾಡಿದರು.
ಒಂದು ವಾರ್ಡ್‍ನಲ್ಲಿ 20 ರಿಂದ 25 ರೋಗಿಗಳು ಇರುತ್ತಾರೆ. ಒಬ್ಬ ರೋಗಿ ಜತೆಗೆ ನಾಲ್ಕೈದು ಜನರು ಇರುತ್ತಾರೆ. ಇದರಿಂದ ದೈನಂದಿನ ಕರ್ತವ್ಯಕ್ಕೆ ಬಹಳ ತೊಂದರೆ ಆಗುತ್ತಿದೆ. ಹಾಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಬೆಳಿಗ್ಗೆ 9 ಗಂಟೆಯೊಳಗೆ ಭೇಟಿ ಮಾಡಬೇಕು. ಇದರಿಂದ ವೈದ್ಯರು ರೌಂಡ್ಸ್ ಹಾಗೂ ಚಿಕಿತ್ಸೆ ಮಾಡಲು ಅನುಕೂಲವಾಗಲಿದೆ ಜೊತೆಗೆ ಸ್ವಚ್ಛತೆ ಕಾಪಾಡಲು ಸಾಧ್ಯವಾಗಲಿದೆ. ಮಧ್ಯಾಹ್ನ 12 ರಿಂದ 2 ರವರೆಗೆ ಊಟದ ಸಮಯದಲ್ಲಿ ರೋಗಿಗಳನ್ನು ಭೇಟಿ ಆಗಬಹುದು. ಮಧ್ಯಾಹ್ನ 2 ರಿಂದ 4 ರವರೆಗೆ ರೋಗಿಗಳಿಗೆ ವಿಶ್ರಾಂತಿಗೆ ಅವಕಾಶ ಮಾಡಿಕೊಡಬೇಕು. ಇದರಿಂದ ರೋಗಿಗಳು ಬೇಗ ಗುಣಮುಖವಾಗಲಿದ್ದಾರೆ ಎಂದು ಮನವಿ ಮಾಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಜನರಲ್ ಸರ್ಜರಿ, ಜನರಲ್ ಮೆಡಿಸಿನ್, ಒಬಿಜಿ, ಪಿಡಿಯಾಟ್ರಿಕ್ಸ್, ತುರ್ತು ಚಿಕಿತ್ಸಾ ವಿಭಾಗ, ಅನಸ್ತೇಶಿಯಾ, ಕಣ್ಣಿನ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ರಕ್ತನಿಧಿ ಕೇಂದ್ರ, ಜಿಎನ್‍ಎಂ, ಬಿಎಸ್ಸಿ ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಸೇರಿದಂತೆ ಒಟ್ಟು 33 ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ತಜ್ಞವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಖಾಲಿ ಹುದ್ದೆಗಳು ಇಲ್ಲ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಮಾತ್ರ 7 ಹುದ್ದೆಗಳು ಖಾಲಿ ಇವೆ. ಗ್ರೂಪ್ ಡಿ ಮತ್ತು ಶುಶ್ರೂಷಕರು ತಲಾ 25 ಹುದ್ದೆಗಳ ಖಾಲಿ ಇವೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯು 300 ಹಾಸಿಗೆ ಸಾಮಾಥ್ರ್ಯದ ಆಸ್ಪತ್ರೆಯಾಗಿದ್ದು, ಇದಕ್ಕೆ ಅನುಗುಣವಾಗಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲಕ್ರಮೇಣ ಇದನ್ನು 450 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಇದಕ್ಕೆ ತಕ್ಕಂತೆ ಸಿಬ್ಬಂದಿಯನ್ನು ಇನ್ನೂ ನಿಯೋಜನೆ ಮಾಡಿಲ್ಲ. ಹಾಗಾಗಿ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಸ್ಪತ್ರೆಯ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, 450 ಹಾಸಿಗೆ ಸಾಮಾಥ್ರ್ಯಕ್ಕೆ ತಕ್ಕಂತೆ ಸಿಬ್ಬಂದಿ ನಿಯೋಜನೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕ್ರಮವಹಿಸಲಾಗಿದೆ ಎಂದರು.
ಕಳೆದ ಒಂದು ತಿಂಗಳ ಅವಧಿಯಲ್ಲಿ 32,823 ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 5357 ಜನರು ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಜಿಲ್ಲಾಸ್ಪತ್ರೆಯ ಸಿ.ಟಿ ಸ್ಕ್ಯಾನ್ ವಿಭಾಗದಲ್ಲಿ 459 ಸಿಟಿ ಸ್ಕ್ಯಾನ್ ಮಾಡಲಾಗಿದೆ. ಎಬಿಎಆರ್‍ಕೆ ಅಡಿಯಲ್ಲಿ ಬರುವ ಸ್ಕ್ಯಾನ್‍ಗಳನ್ನು ಉಚಿತವಾಗಿ ಸೌಲಭ್ಯ ನೀಡಲಾಗುವುದು. 1604 ಜನರನ್ನು ಎಬಿಎಆರ್‍ಕೆ ಅಡಿಯಲ್ಲಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ. ಇದರಲ್ಲಿ ಎಬಿಎಆರ್‍ಕೆ ಅಡಿಯಲ್ಲಿ ರೋಗಿಗಳನ್ನು ದಾಖಲು ಮಾಡಿದರೆ ಸರ್ಕಾರದ ಹಣ ಬರಲಿದೆ. 2500 ರೋಗಿಗಳಿಗೆ ಎಂಆರ್‍ಐ ಸ್ಕ್ಯಾನ್ ಮಾಡಲಾಗಿದೆ. ಎಂಆರ್‍ಐಗೆ ಜಿಲ್ಲೆ ಮಾತ್ರವಲ್ಲದೇ ಶಿವಮೊಗ್ಗ, ಚಿಕ್ಕಮಗಳೂರು, ವಿಜಯನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಎಂಆರ್‍ಐ ಸೌಲಭ್ಯ ನೀಡಲಾಗುತ್ತಿದೆ. 170 ಜನರಲ್ ಸರ್ಜರಿ, 30 ಪ್ರಕರಣ ಸಣ್ಣಪುಟ್ಟ ಆಪರೇಷನ್ ಮಾಡಲಾಗಿದೆ. 122 ಮೂಳೆ ಮುರಿತದ ಆಪರೇಷನ್ ಮಾಡಲಾಗಿದ್ದು, ಮೂಳೆ ಮುರಿತದ ಆಪರೇಷನ್‍ನಲ್ಲಿ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ರಕ್ತನಿಧಿ ಕೇಂದ್ರದಲ್ಲಿ 530 ಯೂನಿಟ್ ಬ್ಲಡ್ ಸಂಗ್ರಹಿಸಿ 439 ಯುನಿಟ್ ಜನರಿಗೆ ವಿತರಣೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 653 ಹೆರಿಗೆ ಆಗಿವೆ. 189 ನಾರ್ಮಲ್ ಹಾಗೂ 464 ಸಿಜೇರಿಯನ್ ಹೆರಿಗೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ವಿವಿಧ ಕಾರಣಗಳಿಗಾಗಿ ಅಪಾಯ ಸ್ಥಿತಿಯಲ್ಲಿನ ಸುಮಾರು 250 ಕ್ಕೂ ಹೆಚ್ಚು ಶಿಶುಗಳ ಜೀವ ರಕ್ಷಿಸಲಾಗಿದೆ ಎಂದರು.
ಕಳೆದ ತಿಂಗಳು ಹಾವು ಕಚ್ಚಿದ ಪ್ರಕರಣಗಳು 52 ಬಂದಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷ ಸೇವಿಸಿದ 133 ಪ್ರಕರಣಗಳಲ್ಲಿ ತಡವಾಗಿ ಬಂದ ಒಂದು ಪ್ರಕರಣ ಡೆತ್ ಆಗಿದೆ ಎಂದರು.
ಬರುವ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸಂಕಲ್ಪ ಕೈಗೊಳ್ಳಲಾಗಿದ್ದು, ವಾರಕ್ಕೊಮ್ಮೆ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಲು ಕೂಡ ನಿರ್ಧರಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಹಾಗೂ ಸ್ವಚ್ಛತೆಯಲ್ಲಿಯೂ ಕೂಡ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರವೀಂದ್ರ ಮನವಿ ಮಾಡಿದರು.