ಚಿತ್ರದುರ್ಗ. ನವೆಂಬರ್ .07: ಬರ ಹಿನ್ನಲೆಯಲ್ಲಿ ಜಿಲ್ಲೆಯ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ, ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವಂತಹ ಸಮಸ್ಯೆಯಾತ್ಮಕ ಗ್ರಾಮಗಳ ಪಟ್ಟಿ ತಯಾರಿಸಿ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ತಕ್ಷಣ ಪರಿಹಾರ ಕಾರ್ಯಕೈಗೊಳ್ಳಬೇಕು, ಪರಿಹಾರ ಕಾರ್ಯಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಬರ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಆರು ತಾಲ್ಲೂಕುಗಳಲ್ಲೂ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ತುರ್ತಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಜಿಲ್ಲೆಯ ಹೊಸದುರ್ಗ ಹಾಗೂ ಹಿರಿಯೂರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಈಗಾಗಲೇ ಸಭೆ ನಡೆಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಇದರ ಜೊತೆಗೆ ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಅಭಾವ ಇರುವ ಜಿಲ್ಲೆಯ 125 ಸಮಸ್ಯಾತ್ಮಕ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸಭೆಗೆ ಮಾಹಿತಿ ನೀಡಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಬೋರ್ ವೆಲ್ ಕೊರೆಸಲು ಅವಕಾಶ ನೀಡಬೇಕು. ಬೋರ್‍ವೆಲ್ ಕೊರೆಸಲು ಇರುವ ಮಾರ್ಗಸೂಚಿಗಳನ್ನು ಸರಳಗೊಳಿಸಬೇಕು. ಬೋರ್‍ವೆಲ್‍ಗೆ ಅನುಮತಿ ಪಡೆಯುವ ವಿಧಾನವೂ ತ್ವರಿತವಾಗಬೇಕು. ಪೈಪ್, ಮೋಟಾರ್ ವ್ಯವಸ್ಥೆಯೊಂದಿಗೆ ಬೋರ್‍ವೆಲ್ ಕೊರೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಎಂ.ಚಂದ್ರಪ್ಪ ಕುಡಿಯುವ ನೀರಿನ ಸಮಸ್ಯೆ ಆದ ತಕ್ಷಣವೇ ಬೋರ್‍ವೆಲ್ ಕೊರೆಸುವ ವ್ಯವಸ್ಥೆ ಆಗಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಗಳ ವಿಶೇಷ ತಂಡ ರಚನೆ ಮಾಡಿ, ನೀರಿನ ಸಮಸ್ಯೆಯಾಗದಂತೆ ಶೀಘ್ರ ಎಚ್ಚೆತ್ತುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಜನರಿಗೆ ನೀರು, ಜಾನುವಾರುಗಳಿಗೆ ಮೇವು ಸಿಗಬೇಕು. ಈ ಕುರಿತು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳು ಕ್ರಿಯಾಯೋಜನೆ ರೂಪಿಸಬೇಕು ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ, ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸ್ಥಿತಿ ಗತಿ ಬಗ್ಗೆ ಸೂಕ್ತ ಮಾಹಿತಿ ತಯಾರಿಸಿ, ಸಲ್ಲಿಸುವಂತೆ ಸೂಚನೆ ನೀಡಿದರು.
ಆರ್‍ಓ ಘಟಕ ದುರಸ್ಥಿಗೊಳಿಸಿ: ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ, ಚಾಲನೆಗೊಳಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಮರ್ಪಕವಾಗಿ ದುರಸ್ಥಿಗೊಳಿಸುತ್ತಿಲ್ಲ. ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ, ಕಾರ್ಯಾರಂಭ ಮಾಡುವಂತೆ ಅಗತ್ಯ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಂಬಂಧಪಟ್ಟ ಏಜೆನ್ಸಿಯವರು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಸರಿಯಾಗಿ ನಿರ್ವಹಣೆ ಮಾಡದ ಏಜೆನ್ಸಿಯವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಜಿ.ಪಂ ಸಿಇಒ ತಿಳಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಡಿಯಲ್ಲಿ ಬೋರ್‍ವೆಲ್ ಕೊರೆಸಲು ಅವಕಾಶವಿದೆ. ಅವಶ್ಯಕತೆ ಇರುವ ಕಡೆ ಖಚಿತಪಡಿಸಿಕೊಂಡು ಬೋರ್‍ವೆಲ್ ಕೊರೆಸಬಹುದು. ಹಾಗಾಗಿ ಬೋರ್‍ವೆಲ್ ಕೊರೆಸಲು ಅಗತ್ಯವಿರುವ ಗ್ರಾಮಗಳ ವಿವರವನ್ನು ತಯಾರಿಸಿ ಸಲ್ಲಿಸಲು ಸೂಚನೆ ನೀಡಿದರು.
ಮೇವು ಮಾಹಿತಿ ನಿಖರವಾಗಿರಲಿ: ಮಳೆ ಕೊರತೆ ಹಿನ್ನಲೆಯಲ್ಲಿ ಮೇವಿನ ಅಭಾವ ತೀವ್ರವಾಗುತ್ತಿದ್ದು, ಸದ್ಯ ಜಿಲ್ಲೆಯಲ್ಲಿ ಲಭ್ಯವಿರುವ ಮೇವಿನ ಪ್ರಮಾಣದ ವಾಸ್ತವಾಂಶದ ನಿಖರ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಿಗೆ ತಾಕೀತು ಮಾಡಿದರು. ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಜಿಲ್ಲೆಯ ಮೇವಿನ ಪರಿಸ್ಥಿತಿಯ ವಾಸ್ತವಾಂಶ ಸಭೆಯ ಗಮನಕ್ಕೆ ತರಬೇಕು. ತಪ್ಪು ಮಾಹಿತಿ ನೀಡಬಾರದು. ಮೂಕ ಪ್ರಾಣಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಯೋಗಿಕ ವರದಿ ನೀಡಿ ಎಂದು ಸೂಚನೆ ನೀಡಿದರು. ಹೋಬಳಿಗೊಂದು ಗೋಶಾಲೆ ತೆರೆಯಬೇಕು. ಈ ಕುರಿತು ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಹೇಳಿದರು. ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಮೇವಿನ ಕೊರತೆಯಾದಲ್ಲಿ, ಎಲ್ಲೆಲ್ಲಿ ಗೋಶಾಲೆ ತೆರೆಯಬೇಕಾಗುತ್ತದೆ ಎಂಬ ಮಾಹಿತಿಯನ್ನು ಸಿದ್ಧಪಡಿಸಿ ಸಲ್ಲಿಸಲು ಸೂಚಿಸಿದರು.
ತೆಂಗು ಪುನಶ್ಚೇತನಕ್ಕೆ 3.04 ಕೋಟಿ ರೂ. ಅನುದಾನ : ಜಿಲ್ಲೆಯ ಹೊಸದುರ್ಗ, ಹಿರಿಯೂರು ಮತ್ತು ಹೊಳಲ್ಕೆರೆ ತಾಲ್ಲೂಕಿನಲ್ಲಿ ತೆಂಗು ಬೆಳೆಗೆ ಕಪ್ಪು ತಲೆ ಹುಳು ಬಾಧೆಯಿಂದ ಉಂಟಾಗಿರುವ ಹಾನಿಯನ್ನು ತಡೆಗಟ್ಟಿ, ತೆಂಗು ಬೆಳೆಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಮೊದಲ ಹಂತದಲ್ಲಿ ವಿಶೇಷವಾಗಿ 3.04 ಕೋಟಿ ರೂ. ಅನುದಾನವನ್ನು ಒದಗಿಸಿದೆ. ಹೊಸದುರ್ಗ ತಾಲ್ಲೂಕು ಅತಿ ಹೆಚ್ಚು ಬಾಧಿತವಾಗಿದ್ದು, ಶ್ರೀರಾಂಪುರ ಹೋಬಳಿಯಲ್ಲಿ ಈಗಾಗಲೆ ಮೊದಲ ಹಂತದ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಇಲ್ಲಿ 500 ಹೆ. ನಲ್ಲಿ ಕಪ್ಪು ತಲೆ ಹುಳುವಿನ ಬಾಧೆಯಿಂದ ಸಂಪೂರ್ಣವಾಗಿ ಹಾಳಾಗಿರುವ ತೆಂಗಿನ ಗಿಡವನ್ನು ತೆರವುಗೊಳಿಸಿ, ಹೊಸ ಗಿಡ ನೆಡಲು ಪ್ರತಿ ಗಿಡಕ್ಕೆ ಒಂದು ಸಾವಿರ ರೂ. ನಂತೆ ಪ್ರತಿ ಹೆಕ್ಟೇರ್‍ಗೆ 32 ಗಿಡದಂತೆ ಗರಿಷ್ಟ 32 ಸಾವಿರ ರೂ. ನೀಡಲು ಅವಕಾಶ ಕಲ್ಪಿಸಲಾಗಿದೆ. ಹೊಸದುರ್ಗ ತಾಲ್ಲೂಕಿಗೆ 223 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಹಿರಿಯೂರು ತಾಲ್ಲೂಕಿನಲ್ಲಿ 352 ಹೆ. ನಲ್ಲಿನ ತೆಂಗು ಪುನಶ್ಚೇತನಕ್ಕೆ 61.60 ಲಕ್ಷ ರೂ. ಮತ್ತು ಹೊಳಲ್ಕೆರೆ ತಾಲ್ಲೂಕಿನಲ್ಲಿ 100 ಹೆ. ಗಾಗಿ 17.50 ಲಕ್ಷ ರೂ. ಅನುದಾನವನ್ನು ಸರ್ಕಾರ ಒದಗಿಸಿದ್ದು, ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಹಾಗೂ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯಲ್ಲಿ ಮೊದಲ ಹಂತದಲ್ಲಿ ಪುನಶ್ಚೇತನ ಕಾರ್ಯ ಆರಂಭಿಸಬೇಕಾಗಿದೆ. ಈ ತಾಲ್ಲೂಕುಗಳಲ್ಲಿ ರೈತರಿಗೆ ತೆಂಗು ಪುನಶ್ಚೇತನಕ್ಕೆ ಔಷಧಿ, ಗೊಬ್ಬರ ಪರಿಕರವನ್ನು ಉಚಿತವಾಗಿ ನೀಡಿ, ರೈತರಿಗೆ ತಜ್ಞರಿಂದ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಸಮರ್ಪಕವಾಗಿ ಶೀಘ್ರ ಅನುಷ್ಠಾನಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ನರೇಗಾದಡಿ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಿ : ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಹೆಚ್ಚಾಗಿ ಇರುತ್ತದೆ. ಹೀಗಾಗಿ ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಬೇಕು ಎಂದು ಶಾಸಕ ರಘುಮೂರ್ತಿ ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ಸೋಮಶೇಖರ್ ಅವರು, ಜಿಲ್ಲೆಯಲ್ಲಿ ಈಗಾಗಲೆ ಉದ್ಯೋಗ ಸೃಷ್ಟಿಯಾಗುವಂತಹ ಕಾಮಗಾರಿಗಳಾದ ಗೋಕಟ್ಟೆ ಹಾಗೂ ನಾಲೆಗಳ ಹೂಳು ತೆಗೆಯುವುದು ಸೇರಿದಂತೆ ಹೆಚ್ಚು ಹೆಚ್ಚು ಮಾನವ ದಿನಗಳನ್ನು ಸೃಜಿಸುವಂತಹ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗುತ್ತಿದೆ. ಈ ವರ್ಷ ನರೇಗಾದಡಿ 48 ಲಕ್ಷ ಮಾನವ ದಿನಗಳ ಸೃಜನೆಯ ಗುರಿಗೆ ಈಗಾಗಲೆ 41 ಲಕ್ಷ ಮಾನವ ದಿನ ಸೃಜಿಸಿ ಶೇ. 85 ರಷ್ಟು ಸಾಧನೆಯಾಗಿದೆ ಎಂದರು. ನರೇಗಾ ಯೋಜನೆಯಡಿ ಉದ್ಯೋಗ ಕಲ್ಪಿಸುವ ಕುರಿತು ಹಾಗೂ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ನೀಡಲಾಗುವ ವಿಷಯದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
13 ಸಾವಿರ ಮೇವಿನ ಕಿಟ್ ಪೂರೈಕೆ : ಬರ ಪರಿಸ್ಥಿತಿ ನಿರ್ವಹಣೆಗಾಗಿ ಮೇವು ಬೆಳೆಯುವುದನ್ನು ಉತ್ತೇಜಿಸಲು ಈಗಾಗಲೆ ಜಿಲ್ಲೆಗೆ 13 ಸಾವಿರ ಮೇವಿನ ಬೀಜದ ಕಿಟ್ ಪೂರೈಕೆಯಾಗಿದೆ. ಈ ಪೈಕಿ ಈಗಾಗಲೆ ಮೊಳಕಾಲ್ಮೂರು ತಾಲ್ಲೂಕಿಗೆ 968, ಚಳ್ಳಕೆರೆ-1019 ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ 1310 ಮೇವಿನ ಕಿಟ್‍ಗಳನ್ನು ಪೂರೈಕೆ ಮಾಡಲಾಗಿದೆ. ಉಳಿದೆಡೆಯೂ ಅಗತ್ಯಕ್ಕನುಗುಣವಾಗಿ ಶೀಘ್ರ ಮೇವಿನ ಬೀಜದ ಕಿಟ್ ಪೂರೈಕೆ ಮಾಡಲಾಗುವುದು. ಬೋರ್‍ವೆಲ್ ಹೊಂದಿರುವವರು, ನೀರಿನ ಸೌಲಭ್ಯ ಇರುವ ರೈತರಿಂದ ಮೇವಿನ ಬೀಜಕ್ಕೆ ಬೇಡಿಕೆ ಬರುತ್ತಿದೆ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರು ಡಾ. ಬಾಬು ರತ್ನ ಹೇಳಿದರು.
ಸಭೆಯಲ್ಲಿ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಡಾ.ಎಂಚಂದ್ರಪ್ಪ, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆಯ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. ಫೋಟೋ ವಿವರ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಬರ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.