ಬೆಂಗಳೂರು: ರಾಜ್ಯದಲ್ಲಿ ಮಳೆ ಇಲ್ಲದೆ ರೈತ ಕಂಗಲಾಗಿ ಕೂತಿದ್ದಾನೆ. ಈಗಾಗಲೇ ರಾಜ್ಯ ಸರ್ಕಾರ 126 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ ಆಗಿದೆ. ಇದೀಗ ಮತ್ತೆ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಬೀದರ್, ರಾಯಚೂರು, ವಿಜಯಪುರ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ಎಂದು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಕೇಂದ್ರ ಸರ್ಕಾರ ನಿಯಮಾನುಸಾರವೇ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಈ ಘೋಷಣೆ ತಕ್ಷಣ ಜಾರಿಗೆ ಬರುವಂತೆ, ಮುಂದಿನ ಆರು ತಿಂಗಳ ಅವಧಿಗೆ ಘೋಷಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರು ಪ್ರಸ್ತಾವನೆಯಲ್ಲಿ ಕೇಂದ್ರ ಸರ್ಕಾರದ ಬರ ಕೈಪಿಡಿ-2020 ರಲ್ಲಿ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳನ್ನು ಹಂತ-1ರಲ್ಲಿ ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ ಅಥವಾ ಸತತ ಮೂರು ವಾರಗಳ ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ ಕಂಡು ಬಂದಿರಬೇಕು. ಹಂತ-2 ರಲ್ಲಿ ತತ್ಪರಿಣಾಮ ಮಾನದಂಡಗಳಾದ ಕೃಷಿ ಬಿತ್ತನೆ ಪ್ರದೇಶ, ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ ತೇವಾಂಶ ಕೊರತೆ ಹಾಗೂ ನದಿಗಳಲ್ಲಿನ ಹರಿವು ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಸೂಚ್ಯಂಕಗಳಲ್ಲಿನ ತೀವ್ರತೆಯನ್ನು ಆಧರಿಸಿ ಹೆಚ್ಚುವರಿಯಾಗಿ 07 ತಾಲ್ಲೂಕುಗಳು ಬರ ಪರಿಸ್ಥಿತಿ ಉದ್ಭವಿಸಿರುವ ತಾಲ್ಲೂಕುಗಳೆಂದು ಗುರುತಿಸಲಾಗಿದೆ.
ಈ ನಡುವೆ ಈಗಾಗಲೇ ಬರಪೀಡಿತ ಪ್ರದೇಶ ಎಂದು ಗುರುತಿಸಿ, ಕೇಂದ್ರಕ್ಕೆ ವರದಿ ನೀಡಲಾಗಿದೆ. ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾದರೂ, ಇನ್ನು ಕೂಡ ಒಂದು ರೂಪಾಯಿ ಪರಿಹಾರ ಹಣ ಸಿಕ್ಕಿಲ್ಲ ಎಂದೇ ಸಿಎಂ ಸಿದ್ದರಾಮಯ್ಯ ಕೂಡ ಬೇಸರ ಹೊರ ಹಾಕಿದ್ದಾರೆ.