ಏಪ್ರಿಲ್ ಅಂತ್ಯದೊಳಗೆ ಬಾಕಿಯಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಿ : ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

3 Min Read

ಚಿತ್ರದುರ್ಗ : ನ. 04:‌‌  ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು 2024ರ ಏಪ್ರಿಲ್ ಮಾಹೆಯ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರು ಹಾಗೂ ಸಂಸದರಾದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ರಸ್ತೆ ಕಾಮಗಾರಿಗಳು, ಪಿ.ಎಂ.ಸ್ವನಿಧಿ ಯೋಜನೆ ಹಾಗೂ ಪಿಎಂ ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಶೇ.40 ಕ್ಕಿಂತ ಹೆಚ್ಚಾಗಿ ಪೂರ್ಣಗೊಂಡಿಲ್ಲ. ಭೂಸ್ವಾಧೀನ ಪ್ರಕ್ರಿಯೆ, ಕಾಮಗಾರಿಗಳನ್ನು ನಿಗಧಿತ ಸಮಯದೊಳಗೆ ಪೂರ್ಣಗೊಳಿಸದೇ ವಿಳಂಬ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹಿರಿಯೂರು-ಹುಳಿಯಾರು, ಹೊಳಲ್ಕೆರೆ-ಹೊಸದುರ್ಗ, ಮೊಳಕಾಲ್ಮುರು-ಹಾನಗಲ್, ಚಿತ್ರದುರ್ಗ-ಶಿವಮೊಗ್ಗ, ಹೊಸದುರ್ಗ-ಕಡೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ 2024ರ ಏಪ್ರಿಲ್ ಮಾಹೆಯೊಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.  ಚಿತ್ರದುರ್ಗ-ಹೊಳಲ್ಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿತ್ರದುರ್ಗ ನಗರದ ಕವಾಡಿಗರ ಹಟ್ಟಿ ಬಳಿ ಹೆದ್ದಾರಿಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಇದುವರೆಗೂ ಕೈಗೊಳ್ಳದಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕೂಡಲೆ ರೈಲ್ವೆ ಇಲಾಖೆಯಿಂದ ಅನುಮೋದನೆ ಪಡೆದು, ಕಾಮಗಾರಿ ಪ್ರಾರಂಭಿಸುವಂತೆ ತಾಕೀತು ಮಾಡಿದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಗಳಲ್ಲಿ ಗ್ರಾಮೀಣ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಹೈಮಾಸ್ಟ್, ಬಸ್‍ಸ್ಟಾಂಡ್ ಸೇರಿದಂತೆ ಜನರ ಅವಶ್ಯಕತೆಗೆ ಅನುಗುಣವಾಗಿ ಕಾಮಗಾರಿ ನಿರ್ಮಿಸುವಂತೆ ಸೂಚನೆ ನೀಡಿದ ಸಚಿವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ 15 ರಿಂದ 20 ಕಿ.ಮೀಗೆ ಒಂದರಂತೆ ಟೋಲ್ ನಿರ್ಮಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಭಿಪ್ರಾಯ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಹೊಸದಾಗಿ 120 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಜಿಲ್ಲೆ ಶಿರಾ-ಅಮರಾಪುರ ರಾಷ್ಟ್ರೀಯ ಹೆದ್ದಾರಿ ಯೋಜನೆ ಮಂಜೂರಾತಿ ಆಗಿದ್ದು, ಅಗ್ರಿಮೆಂಟ್‍ಗೆ ಸಹಿ ಆಗುವುದು ಬಾಕಿ ಇದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಪಿಎಂ-ಸ್ವನಿಧಿ ಯೋಜನೆಗೆ ಅಕ್ಟೋಬರ್ ಮಾಹೆಯಲ್ಲಿ 450  ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 320 ಮಂದಿಗೆ ಈಗಾಗಲೇ ಸಾಲಸೌಲಭ್ಯ ನೀಡಲಾಗಿದೆ. 80 ಅರ್ಜಿಗಳು ಬಾಕಿ ಇವೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಭಿಯಾನ ವ್ಯವಸ್ಥಾಪಕ ಅತೀಕ್ ರೆಹಮಾನ್ ಸಭೆಗೆ ಮಾಹಿತಿ ನೀಡಿದರು.

ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರಸಭೆಯ ಶೇ.7.5 ಹಾಗೂ ಶೇ.18ರ ಅನುದಾನದಲ್ಲಿ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಟ 5 ಜನ ಬೀದಿ ಬದಿ ವ್ಯಾಪಾರಿಗಳಿಗೆ ನವೀನ ಮಾದರಿಯಲ್ಲಿ ಶೆಲ್ಟರ್ ನಿರ್ಮಿಸಿ ಕೊಡುವಂತೆ ಸಚಿವರು ಸಲಹೆ ನೀಡಿದರು.
ವಿಶ್ವಕರ್ಮ ಯೋಜನೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬ ವರದಿ ಇದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಮಾಡಲು ಆಸಕ್ತರಿರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಯಲ್ಲಿದ್ದು, ಈ ಬಗ್ಗೆ ಆಸಕ್ತರಿಂದ ಅರ್ಜಿ ಪಡೆದು, ಫಲಾನುಭವಿಗಳ ಪಟ್ಟಿ ಮಾಡಬೇಕು.  ರಾಷ್ಟ್ರೀಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಡಿ ಬಡವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಅವಕಾಶವಿದೆ.  ಬಡವರು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇದರಿಂದ ನೆರವಾಗಲಿದೆ.  ಹೀಗಾಗಿ ಲೀಡ್ ಬ್ಯಾಂಕ್ ಅಧಿಕಾರಿಗಳು ಕೂಡಲೆ ಸಹಕಾರಿ ಕ್ಷೇತ್ರದ ನಿರ್ದೇಶಕರು, ಡೈರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ಬಗ್ಗೆ ಮಾಹಿತಿ ನೀಡಿ, ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಂತಹ ಕಾರ್ಯ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

 

Share This Article
Leave a Comment

Leave a Reply

Your email address will not be published. Required fields are marked *