ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.30 : ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ವರ್ಗಾವಣೆ ವದಂತಿ ಹಿನ್ನೆಲೆಯಲ್ಲಿ ಅವರ ವರ್ಗಾವಣೆಯನ್ನು ವಾಪಸ್ ಪಡೆದು ಅವರನ್ನು ಇನ್ನೂ ಒಂದು ವರ್ಷಗಳ ಕಾಲ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದಿವ್ಯಪ್ರಭು ಜಿ.ಆರ್.ಜೆ. ಅವರು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಅಕ್ರಮ ಮರಳು ಮತ್ತು ಗಣಿ ಸಾಗಾಣಿಕೆಯ ವಿರುದ್ಧ ಕ್ರಮವಹಿಸಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಡಳಿತ ನಡೆಸಿದ್ದಾರೆ. ಜಿಲ್ಲೆಯ ಆರು ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಬೆಳೆ ವಿಮೆ ವಿಚಾರದಲ್ಲಿ ವಿಮಾ ಪ್ರತಿನಿಧಿಗಳನ್ನು ಜಿಲ್ಲಾಧಿಕಾರಿಗಳ ಸಭಾಂಗಣಕ್ಕೆ ಕರೆಸಿ, ರೈತರೊಂದಿಗೆ ಚರ್ಚಿಸಿ ವಿಮೆಯನ್ನು ತುರ್ತಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ಆದೇಶ ನೀಡಿರುತ್ತಾರೆ.
ಬೆಸ್ಕಾಂ ಇಲಾಖೆ ವಿದ್ಯುತ್ ಕಡಿತಗೊಳಿಸಿದಾಗ ಅಧಿಕಾರಿಗಳಿಗೆ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೃಷಿ ಪಂಪ್ ಸೆಟ್ ಮಾರ್ಗಗಳಿಗೆ ವಿದ್ಯುತ್ ನೀಡುವಂತೆ ಕ್ರಮವಹಿಸಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಜಿಲ್ಲಾಧಿಕಾರಿಯವರನ್ನು ಇನ್ನು ಒಂದು ವರ್ಷ ವರ್ಗಾವಣೆ ಮಾಡಬಾರದೆಂದು ರೈತ ಸಂಘವು ಒತ್ತಾಯಿಸಿದೆ.
ಒಂದು ವೇಳೆ ಸರ್ಕಾರ ರಾಜಕೀಯ ಒತ್ತಡಗಳಿಗೆ ಮಣಿದು ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಮುಂದಾದರೆ ಮಹಿಳಾ ಸಂಘಟನೆಗಳು, ರೈತ ಸಂಘ ಮತ್ತು ಸಾರ್ವಜನಿಕರು ಹೋರಾಟವನ್ನು ಕೈಗೆತ್ತಿಕೊಂಡು ಜಿಲ್ಲೆಯಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ. ಒಂದು ವೇಳೆ ಈ ಹೋರಾಟದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದಲ್ಲಿ ಸರ್ಕಾರವೇ ಜವಾಬ್ದಾರಿಯೆಂದು ರೈತ ಸಂಘ ಪ್ರಕಟಣೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸಿ. ಹೊರೆಕೆರಪ್ಪ, ಚಿತ್ರದುರ್ಗ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಧನಂಜಯ, ಚಳ್ಳಕೆರೆ ತಾಲೂಕು ರೈತ ಸಂಘದ ಅಧ್ಯಕ್ಷ ಟಿ. ಹಂಪಣ್ಣ, ಕಲ್ಲೇನಹಳ್ಳಿಯ ಯುವ ರೈತ ಕುಮಾರ, ಜಿಲ್ಲಾ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಜಿಲ್ಲಾ ಮಹಿಳಾ ಸಂಚಾಲಕಿ ಸುಧಾ, ತಾಲೂಕು ಮಹಿಳಾ ಸಂಚಾಲಕಿ ಶಶಿಕಲಾ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.