ಬೆಂಗಳೂರು: ವಿನಾಕಾರಣ ಬೆಳಗಾವಿಯಲ್ಲಿ ಕನ್ನಡಿಗರನ್ನು ಕೆಣಕುತ್ತಾ ಕನ್ನಡಕ್ಕೆ ಅಪಮಾನ ಮಾಡುತ್ತಿರುವ ಎಂಇಎಸ್ʼಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ಇನ್ನೂ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕುಂದಾ ನಗರಿಯ ಪ್ರತಿಷ್ಠೆಗೆ ಧಕ್ಕೆ ತಂದು ಅಲ್ಲಿನ ಸೌಹಾರ್ದ ವಾತಾವರಣವನ್ನು ಹಾಳು ಮಾಡುತ್ತಿರುವ ಎಂಇಎಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ಚುನಾವಣೆಗಳಲ್ಲಿ ರಾಜಕೀಯವಾಗಿ ಮುಖಭಂಗ ಅನುಭವಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ- ಎಂಇಎಸ್, ಈಗ ಕನ್ನಡ ರಾಜ್ಯೋತ್ಸವ ಹತ್ತಿರಕ್ಕೆ ಬಂದ ಸಂದರ್ಭದಲ್ಲೇ ಪುಂಡಾಟಿಕೆ ಶುರು ಮಾಡಿದೆ. ಕನ್ನಡ ಅಸ್ಮಿತೆಯನ್ನೇ ಕೆಣಕುವ, ಕನ್ನಡಿಗರನ್ನು ಅಪಮಾನಿಸುವ ಹೇಯ ಕೆಲಸಕ್ಕೆ ಮುಂದಾಗಿದೆ.
ಕೆಲ ದಿನಗಳಿಂದ ಬೆಳಗಾವಿಯಲ್ಲಿ ಕನ್ನಡಿಗರನ್ನು ಎಂಇಎಸ್ ವಿನಾಕಾರಣ ಕೆಣಕುತ್ತಿದೆ. ಪ್ರತಿಭಟನೆಯ ವೇಳೆ ಕರ್ನಾಟಕ ಸರಕಾರವನ್ನು ಎಂಇಎಸ್ ಪುಂಡರು ಗೇಲಿ ಮಾಡಿದ್ದಾರೆ.
ಅಲ್ಲಿನ ಸರಕಾರಿ ಕಚೇರಿಗಳಲ್ಲಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲೇ ಕೊಡಬೇಕು ಎಂದು ಒತ್ತಾಯಿಸುವ ಭರದಲ್ಲಿ ಕರ್ನಾಟಕ ಸರಕಾರವನ್ನು ʼನಾಲಾಯಕ್ʼ ಎಂದು ಕರೆದು ʼಜೈ ಮಹಾರಾಷ್ಟ್ರʼ ಎಂದು ಘೋಷಣೆ ಕೂಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಖಂಡನೀಯ.
ರಾಜಕೀಯವಾಗಿ ಮೂಲೆಗುಂಪಾಗಿರುವ ಎಂಇಎಸ್ , ತಮ್ಮ ಅಸ್ತಿತ್ವಕ್ಕಾಗಿ ಬೆಳಗಾವಿಯಲ್ಲಿ ಗೊಂದಲ, ಗದ್ದಲ ಉಂಟು ಮಾಡುತ್ತಿದೆ. ಭಾಷಾ ಭ್ರಾತೃತ್ವ, ಸ್ನೇಹಶೀಲತೆ ಹಾಗೂ ಶಾಂತಿ ಸಹನೆಗೆ ಹೆಸರಾಗಿರುವ ಕುಂದಾ ನಗರಿಯ ಪ್ರತಿಷ್ಠೆಯನ್ನು ಹಾಳು ಮಾಡುವ ದುರುದ್ದೇಶ ಇವರಿಗಿದೆ.
ನಾಡು ನುಡಿಯ ವಿಷಯದಲ್ಲಿ ರಾಜ್ಯ ಸರಕಾರ ಅಲಕ್ಷ್ಯ ಮಾಡಲೇಬಾರದು. ಕನ್ನಡವನ್ನು ಅಪಮಾನಿಸುವ ಈ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ನಾನು ಸರಕಾರವನ್ನು ಒತ್ತಾಯ ಮಾಡುತ್ತೇನೆ.