ಹುಲಿ ಉಗುರು ಪ್ರಕರಣದಿಂದ ಸಾಕಷ್ಟು ಕೇಸ್ ಗಳು ಹೊರಗೆ ಬರುತ್ತಿವೆ. ಈ ಸಂಬಂಧ ಮಾತನಾಡಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಹುಲಿ ಉಗುರು ಡಾಲರ್ ಲಾಕೆಟ್ ಇರುವವರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಾ ಹೋದರೆ, ರಾಜ್ಯದಲ್ಲಿನ ಜೈಲೇ ಸಾಕಾಗಲ್ಲ ಎಂದಿದ್ದಾರೆ.
‘ಮಲೆನಾಡು, ಕರಾವಳಿ ಭಾಗದಲ್ಲಿ ಕೆಲವು ಮನೆಗಳಲ್ಲಿ ಹುಲಿ ಉಗುರು ಸೇರಿದಂತೆ ಅನೇಕ ಪ್ರಾಣಿಗಳ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ನಡೆದು ಬಂದಿದೆ. ಸತ್ತು ಬಿದ್ದ ಪ್ರಾಣಿಗಳ ವಸ್ತುಗಳನ್ನು ಧೈರ್ಯದ ಪ್ರತೀಕ ಎಂದು ಹಾಕುತ್ತಿದ್ದರು. ಇತ್ತೀಚೆಗೆ ಶ್ರೀಮಂತರು ಅದನ್ನು ಚಿನ್ನದ ಪೆಂಡೆಂಟ್ ಮಾಡಿ ಹಾಕುತ್ತಾರೆ. ಈ ಕುರಿತು ಜನರನ್ನು ಏಕಾಏಕಿ ಬಂಧಿಸುವುದು ಸರಿಯಲ್ಲ. ಸರ್ಕಾರ ಇದಕ್ಕೆ ಮಧ್ಯಪ್ರವೇಶ ಮಾಡಬೇಕು’ ಎಂದಿದ್ದಾರೆ.
ಹಣಗೇರಿನಲ್ಲಿರುವ ದರ್ಗಾಕ್ಕೆ ಸ್ಪೀಕರ್, ಮಂತ್ರಿಗಳು ಎಲ್ಲಾ ಹೋಗುತ್ತಾರೆ. ಅಲ್ಲಿ ನವಿಲುಗರಿಯಿಂದ ಆಶೀರ್ವಾದ ಮಾಡುತ್ತಾರೆ. ಅದು ಅಲ್ಲಿನ ಪದ್ಧತಿ. ವನ್ಯಜೀವಿ ಕಾಯ್ದೆಯ ಉಲ್ಲಂಘನೆಯಾದಂತೆ ಆದರೆ ಅವರನ್ನು ಬಂಧಿಸಬೇಕು. ಟಿಪ್ಪು ಸುಲ್ತಾನ್ ಹುಲಿಯೊಂದನ್ನು ಕೊಂದು ಅದರ ಮೇಲೆ ಕೂತಿರುವ ಫೋಟೋ ಹಲವರ ಮನೆಯಲ್ಲಿ ನೇತು ಹಾಕಿದ್ದಾರೆ. ಅದನ್ನು ನೋಡಿ ಬೇರೆ ಜನ ಹುಲಿಯನ್ನು ಬೇಟೆಯಾಡಲು ಮುಂದಾದರೆ ಹೇಗೆ..? ಕೆಲವರು ತಮಗೆ ತಿಳಿಯದೆ, ಇನ್ನುಬಕೆಲವರು ಪರಂಪರಾಗತವಾಗಿ ಹುಲಿ ಉಗುರನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಅವರನ್ನೆಲ್ಲ ಬಂಧಿಸಿ, ಜೈಲಿಗೆ ಹಾಕುತ್ತಾ ಹೋದರೆ ಜೈಲು ಸಾಕಾಗುವುದಿಲ್ಲ. ಈ ಸಂಬಂಧ ಅರಣ್ಯ ಇಲಾಖೆ ಸಚಿವ ಹಾಗೂ ಅಧಿಕಾರಿಗಳು ಚರ್ಚೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಮಾಜಿ ಗೇಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.