ಕುಲಕುಲವೆಂದು ಬಡಿದಾಡದಿರಿ. ಕುಲದ ನೆಲೆಯನ್ನೇನಾದರೂ ಬಲ್ಲೀರಾ ಎಂದು ಕನಕದಾಸರ ನುಡಿಗಳನ್ನೇ ಹೇಳುವ ಮೂಲಕ ಬಿಜೆಪಿ ಶಾಸಕ ರಿಸರ್ವೇಷನ್ ಬಗ್ಗೆ ಮಾತನಾಡಿದ್ದಾರೆ. ಜಮಖಂಡಿಯ ಶಾಸಕ ಜಗದೀಶ್ ರಿಸರ್ವೇಸನ್ ಬಗ್ಗೆ ಮಾತನಾಡಿದ್ದು, ಆ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಮಖಂಡಿ ತಾಲೂಕಿನ ಸಿದ್ಧಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ, ಶಾಸಕ ಜಗದೀಶ್, ಕುಲಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ. ಕುಲದ ನೆಲೆಯನ್ನೇನಾದರೂ ಬಲ್ಲೀರಾ ಎಂದು ಹಿಂದಿನ ಕಾಲದಲ್ಲಿಯೇ ಹೇಳಿದ್ದರು. ಹಾಗೇ ನೋಡಿದರೆ ಕುಲ ಎನ್ನುವುದು ಇಲ್ಲವೆ ಇಲ್ಲ. ಏನಾದರೂ ಸಿಗುತ್ತೆ ಎಂಬ ಕಾರಣಕ್ಕೆ ಮೀಸಲಾತಿ ಸಂಬಂಧ ಬಡಿದಾಟ ನಡೆಯುತ್ತಿದೆ. ಮೀಸಲಾತಿಯನ್ನು ತೆಗೆದು ಒಗೆಯರಿ, ಎಲ್ಲರೂ ಟಾಪ್ ಕ್ಲಾಸ್ ನಲ್ಲಿ ಬಂದು ಬಿಡುತ್ತೀರಿ ಎಂಬ ಹೇಳಿಕೆ ನೀಡಿದ್ದಾರೆ.
ಮೀಸಲಾತಿ ಬಗ್ಗೆ ಶಾಸಕ ಜಗದೀಶ್ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ ದಲಿತ ಪರ ಸಂಘಟನೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ರಾತ್ರೋ ರಾತ್ರಿ ಶಾಸಕ ಜಗದೀಶ್ ಅವರ ಮನೆಗೂ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದೆ. ಆದ್ರೆ ರಾತ್ರಿ ಪೊಲೀಸರು ಈ ಮುತ್ತಿಗೆಯನ್ನು ತಡೆದಿದ್ದಾರೆ. ಇಂದು ಬೆಳಗ್ಗೆ ಜಮಖಂಡಿಯ ದೇಸಾಯಿ ಸರ್ಕಲ್ ನಲ್ಲಿ ಅಂಬೇಡ್ಕರ್ ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಬಿಜೆಪಿ ಶಾಸಕ ಜಗದೀಶ್ ಗುಡಗಂಟಿಯವರ ಹೇಳಿಕೆಯನ್ನು ಖಂಡಿಸಿದ್ದಾರೆ. ಬಿಜೆಪಿ ಹಾಗೂ ಸಂಘಪರಿವಾರದವರು ಹಿಂದಿನಿಂದಲೂ ಮೀಸಲಾತಿಯ ವಿರೋಧಿಗಳು. ಆದರೆ ಜನಪ್ರತಿನಿಧಿಗಳು ಮೀಸಲಾತಿ ಸಂಬಂಧ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.