ಚಿತ್ರದುರ್ಗ, ಅಕ್ಟೋಬರ್.25 : ವೈಚಾರಿಕತೆಯಿಂದ ಗುರುತಿಸಿಕೊಂಡಿರುವ ಮುರುಘಾಮಠದ ಶೂನ್ಯಪೀಠಾರೋಹಣ ಶ್ರೀ ಮುರುಗಿಶಾಂತವೀರ ಮಹಾಸ್ವಾಮಿಗಳ ಕಂಚಿನ ಪುತ್ಥಳಿಯನ್ನು ಇಡುವುದರ ಮೂಲಕ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು.
ಬಂಗಾರದ ಕೀರಿಟ, ಬಂಗಾರದ ಪಾದುಕೆಗಳು ಹಾಗೂ ಕತೃ ಮುರುಘೇಶನಿಗೆ ಬಂಗಾರದ ರುದ್ರಾಕ್ಷಿ ಸರ ಹಾಕುವುದರ ಮೂಲಕ ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರು ಹಾಗೂ ಶ್ರೀಮುರುಘಾಮಠದ ಆಡಳಿತಾಧಿಕಾರಿಗಳಾದ ಶ್ರೀಮತಿ.ಬಿ.ಎಸ್.ರೇಖಾರವರು, ಶರಣ ಸಂಸ್ಕøತಿ ಉತ್ಸವ-2023ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಉಸ್ತುವಾರಿ ಶ್ರೀಗಳಾದ ಶ್ರೀ ಬಸವಪ್ರಭುಸ್ವಾಮಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಂ.ಭರತ್‍ಕುಮಾರ್, ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್ ಅವರ ನೇತೃತ್ವದಲ್ಲಿ ಶೂನ್ಯ ಪೀಠಾರೋಹಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಾಡಿನ ವಿವಿಧ ಮಠಾಧೀಶರು, ಹರಗುರುಚರಮೂರ್ತಿಗಳು, ಸಾಧಕರು, ಭಕ್ತರು, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳು, ನೌಕರ ವರ್ಗದವರು ಹಾಗೂ ಜನ ಸಮೂಹದ ಜಯಘೋಷಣೆಗಳೊಂದಿಗೆ ಶ್ರೀಮಠದಲ್ಲಿ ಶೂನ್ಯ ಪೀಠಾರೋಹಣವನ್ನು ಸಾಕ್ಷೀಕರಿಸಿದರು. ವಿವಿಧ ಕಲಾತಂಡಗಳು ಶ್ರೀಮಠದ ರಾಜಾಂಗಣದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.
ಶ್ರೀಮಠದ ಪ್ರಾಂಗಣದಲ್ಲಿ ಅಲ್ಲಮ ಪ್ರಭುದೇವರ ಮತ್ತು ಧರ್ಮಗುರು ಬಸವಣ್ಣನವರ ಮತ್ತು ಪ್ರಾಚೀನ ಹಸ್ತ ಪ್ರತಿಗಳನ್ನು ಪಲ್ಲಕ್ಕಿಯಲ್ಲಿ ಇಡುವುದರ ಮೂಲಕ ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರು ಹಾಗೂ ಶ್ರೀಮುರುಘಾಮಠದ ಆಡಳಿತಾಧಿಕಾರಿಗಳಾದ ಶ್ರೀಮತಿ.ಬಿ.ಎಸ್.ರೇಖಾರವರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಜಾನಪದ ಕಲಾತಂಡಗಳೊಂದಿಗೆ ಶ್ರೀಮಠದ ಆವರಣದಲ್ಲಿ ವಿಜೃಂಭಣೆಯಿಂದ ನೆರವೇರಿತು.