ಸೇನೆಯಲ್ಲಿ ಕೆಲಸದ ಆಮಿಷ , 150 ಯುವಕರಿಗೆ ಮೋಸ : ಚಿತ್ರದುರ್ಗದಲ್ಲಿ ವಂಚಕ ಅರೆಸ್ಟ್…!

1 Min Read

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.24 : ಯುವಕರಿಗೆ ದೇಶ ಸೇವೆ ಮಾಡಬೇಕು ಎಂಬ ಆಸೆ ಇರುತ್ತೆ. ಅಂತ ಆಸೆ ಇದ್ದರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ. ಆದರೆ ದೇಶಸೇವೆ ಮಾಡುವ ಕೆಲಸದಲ್ಲೂ ಮೋಸ ಮಾಡುವವರು ಹುಟ್ಟಿಕೊಂಡಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ, ಒಂದಲ್ಲ ಎರಡಲ್ಲ 150 ಜನ ಯುವಕರಿಗೆ ಮೋಸ ಮಾಡಿದ್ದಾನೆ.

ಸುಮಾರು 1 ಕೋಟಿ ವಂಚಿಸಿದ್ದ  ಆರೋಪಿಯನ್ನು ಬಂಧಿಸಲಾಗಿದೆ. ಹುಬ್ಬಳ್ಳಿ ಮೂಲದ ಶಿವರಾಜ್ ವಟಗಲ್ ಮೋಸ ಮಾಡಿದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾನೆ. ಸೇನೆಗೆಂದು ಸೇರಲು ಬಯಸುವ ಯುವಕರಿಗೆ, ಶಿವರಾಜ್ ವಟಗಲ್, ತಾನೂ ಭಾರತೀಯ ಸೇನೆಯಲ್ಲಿ  ಕಾರ್ಯನಿರ್ವಹಿಸಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದನು. ಅಷ್ಟೇ ಅಲ್ಲ ಯುವಕರನ್ನು ನಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದನು. ಈ ದಾಖಲೆಗಳನ್ನು ಯುವಕರಿಗೆ ತೋರಿಸಿ ನಂಬಿಸುತ್ತಿದ್ದನು. ಭಾರತೀಯ ಸೇನೆ, ವಾಯುಸೇನೆ ಮತ್ತು ನೌಕಾಪಡೆಯಲ್ಲಿ ಉದ್ಯೋಗ  ಕೊಡಿಸುತ್ತೇನೆ ಎಂದು ಶಿವರಾಜ್ ವಟಗಲ್  150 ಯುವಕರಿಗೆ 1 ಕೋಟಿ ರೂಪಾಯಿ ವಂಚಿಸಿದ್ದನು.

ಈತನಿಂದ ವಂಚನೆಗೆ ಒಳಗಾದ ಪ್ರಕಾಶ್ ಎಂಬುವರು ಶಿವರಾಜ್ ವಟಗಲ್ ವಿರುದ್ಧ ಚಿತ್ರದುರ್ಗದ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮತ್ತು ಮಿಲಿಟರಿ ಗುಪ್ತಚರ ಜಂಟಿಯಾಗಿ ಕಾರ್ಯಾಚರಣೆ ಇಳಿದಿತ್ತು. ಅಕ್ಟೋಬರ್ 20 ರಂದು ಮಿಲಿಟರಿ ಗುಪ್ತಚರ, ಬೆಂಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ತಂಡವು ಜಂಟಿ ಕಾರ್ಯಾಚರಣೆ ನಡೆಸಿ ಚಿತ್ರದುರ್ಗದಲ್ಲಿ ವಂಚಕ ಶಿವರಾಜ್​ ಮತ್ತು ಆತನ ಸಂಗಾತಿ ಭೀಮವ್ವರನ್ನು ಬಂಧಿಸಿದರು.

ಈತ ದಾವಣಗೆರೆ, ಚಿತ್ರದುರ್ಗ ಮಾತ್ರವಲ್ಲದೇ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ವಂಚನೆ ಮಾಡಿರುವುದು ಬಯಲಾಗಿದೆ. ಈ ಸಂಬಂಧ ಶಿವರಾಜ್​ ಮತ್ತು ಆತನ ಸಂಗಾತಿ ಬೀಮವ್ವ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಶಿವರಾಜ್ ನಕಲಿ ನಕಲಿ ಗುರುತಿನ ಚೀಟಿಗಳು ಮತ್ತು ಸೇನಾ ನೇಮಕಾತಿ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *