ರಾಮನಗರ: ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಕನಕಪುರದ ಶಿವನಹಳ್ಳಿ ಗ್ರಾಮದ ದೇವಾಲಯ ಒಂದರ ಪೂಜೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಮನಗರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು ಜಿಲ್ಲೆಯವರು ನಾವೂ. ನಮ್ಮದು ರಾಮನಗರ ಅಲ್ಲ. ಯಾರೋ ಹೆಸರು ಮಾಡುವುದಕ್ಕೆ ಇದಕ್ಕೆ ರಾಮನಗರ ಎಂದು ಹೆಸರಿಟ್ಟಿದ್ದಾರೆ. ನನ್ನ ಮೇಲೆ ನಂಬಿಕೆ ಇಡಿ. ಮುಂದಿನ ದಿನಗಳಲ್ಲಿ ಬೆಂಗಳೂರು ಜಿಲ್ಲೆಗೆ ರಾಮನಗರವನ್ನು ಸೇರಿಸುತ್ತೇನೆ. ನೀವೂ ಬೆಂಗಳೂರು ಜಿಲ್ಲೆಯವರು, ರಾಮನಗರದವರಲ್ಲ ಎಂಬುದು ನಿಮ್ಮ ತಲೆಯಲ್ಲಿ ಇರಲಿ ಎಂದು ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಒಂದಲ್ಲ ಒಂದು ದಿನ ಇಲ್ಲಿನ ಗ್ರಾಮಗಳು ಬೆಂಗಳೂರು ಆಗೇ ಆಗುತ್ತವೆ. ಪ್ರತಿಬಾಡಿಗೆ ಲೆಕ್ಕ ಕಟ್ಟಲಾಗುತ್ತದೆ. ಆದ ಕಾರಣ ಎಲ್ಲರೂ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ಕನಕಪುರ ಬೆಂಗಳೂರಿಗೆ ಸೇರುತ್ತದೆ. ಕನಕಪುರ ಜಿಲ್ಲಾ ಕೇಂದ್ರ ಮಾಡುವ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗುವುದಿಲ್ಲ. ಉಪಮುಖ್ಯಮಂತ್ರಿ ಸ್ಥಾನ ಬೆಂಗಳೂರಿಗೆ ಸೀಮಿತ. ಇದು ನನ್ನ ಊರಿನ ಕೆಲಸ. ನಮ್ಮ ಕ್ಷೇತ್ರದ ಯಾವುದೇ ಕೆಲಸ ಇದ್ದರು ನಾವೂ ಹಿಂಜರಿಯುವುದಿಲ್ಲ. ಅದಕ್ಕೆ ಮೈಸೂರಿನಲ್ಲಿ ಇದ್ದರು, ನಮ್ಮ ಊರಿನ ಕೆಲಸಕ್ಕೆ ಬಂದಿದ್ದೇನೆ. ನಿಮ್ಮ ಜೇಬಿಗೆ ನೇರವಾಗಿ ಹಣ ಹಾಕುವುದಿಲ್ಲ. ಆದರೆ ನಿಮ್ಮ ಆಸ್ತಿ ಮೌಲ್ಯವನ್ನು ಹತ್ತುಪಟ್ಟು ಹೆಚ್ಚು ಮಾಡುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿಧ್ಯೆ ನೀಡಬಹುದು ಎಂದಿದ್ದಾರೆ. ಮಾತಿನ ನಡುವೆ ಪದೇ ಪದೇ ನಾವೂ ಬೆಂಗಳೂರು ಜಿಲ್ಲೆಯವರು ಎಂಬುದನ್ನು ಡಿಸಿಎಂ ಡಿಕೆ ಶಿವಕುಮಾರ್ ನೆನಪಿಸಿದ್ದಾರೆ.