ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.21 :
ಸಾವಯವ ಕೃಷಿಯನ್ನು ಮಾಡುತ್ತಾ ಹೋದರೆ ಸಮಾಜದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗುತ್ತವೆ ಎಂದು ಶ್ರೀಬಸವಪ್ರಭು ಸ್ವಾಮೀಜಿ ಹೇಳಿದರು.
ಶರಣ ಸಂಸ್ಕøತಿ ಉತ್ಸವ-2023 ಅಂಗವಾಗಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಇಂದು(ಶನಿವಾರ) ನಡೆದ ಕೃಷಿಮೇಳ, ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಅವರು ಮಾತನಾಡಿದರು.
ರೈತರು ಬೆಳೆದ ಬೆಳೆಗೆ ಬೆಲೆಯನ್ನು ರೈತರೇ ನಿಗದಿ ಮಾಡುವಂತಾಗಬೇಕು. ಸರ್ಕಾರವಾಗಲಿ, ಮಧ್ಯವರ್ತಿಗಳಿಂದಾಗಲೀ ಬೆಲೆ ನಿಗದಿಯಗುವುದನ್ನು ತಡೆದರೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂದು ನುಡಿದರು.
ರಾವಂದೂರು ಶ್ರೀ ಮುರುಘಾ ಮಠದ ಶ್ರೀ. ನಿ. ಪ್ರ. ಸ್ವ. ಮೋಕ್ಷಪತಿ ಮಹಾಸ್ವಾಮಿಗಳು ಮಾತನಾಡಿ 1978-1980ರಲ್ಲಿ ತಲಾದಾಯ 250ರಿಂದ 300 ರೂಗಳಷ್ಟಿತ್ತು. ಇಂದಿನ ತಲಾದಾಯ 25-30 ಸಾವಿರವಿದೆ. ಕಾರಣ ಸಾವಯವ ಕೃಷಿಗೆ ಪ್ರಾಧಾನ್ಯತೆ. ಕೃಷಿಯ ಬಗ್ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಶ್ರೀಮಠದ ಹಿಂದಿನ ಹಿರಿಯ ಅನೇಕ ಹಿರಿಯ ಸ್ವಾಮೀಜಿಗಳು ನೀಡುತ್ತಾ ಬಂದಿದ್ದಾರೆ. ಗಿಡಮರಗಳನ್ನು ನೆಡಿ, ಮಳೆನೀರನ್ನು ಸಂರಕ್ಷಿಸುವತ್ತ ರೈತರು ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.
ಕೃಷಿಮೇಳ, ಕೃಷಿ ಮತ್ತು ಕೈಗಾರಿಕ ವಸ್ತು ಪ್ರದರ್ಶನವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅಶೋಕ್ ಎಸ್ ಆಲೂರು ಉಧ್ಘಾಟಿಸಿ ಮಾತನಾಡಿ, ಚಿನ್ನದ ಮಾತೇ ಎಲ್ಲಾ ಕಡೇ, ಅನ್ನದ ಮಾತೇ ಇಲ್ಲ. ದೇವರ ಸಮಾನವಾದ ಮಣ್ಣಿನ ಕಡೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಇಂದಿನ ಜನ ನೀಡುತ್ತಿಲ್ಲ. ಮಣ್ಣಿನ ಆರೋಗ್ಯದ ಕಡೆ ಗಮನವನ್ನೂ ನೀಡುತ್ತಿಲ್ಲ. ಶೇಕಡ 80 ರಿಂದ 85ರಷ್ಟು ಜನ ಒಂದು ಎಕರೆಗೂ ಕಡಿಮೆ ಕೃಷಿಭೂಮಿಯನ್ನು ಹೊಂದಿದ್ದಾರೆ. ಅವರುಗಳಿಗೆ ಕೃಷಿ ಉಪಯೋಗಿ ಸಲಕರಣೆ ಬಳಕೆಗಳ ಮಾಹಿತಿ ಕಡಿಮೆಯಾಗುತ್ತಾ ಹೋಗಿದ್ದು, ಅದನ್ನು ಸುಧಾರಿಸಲು ಇಂತಹ ಕೃಷಿ ಸಮಾವೇಶಗಳು ಅವಶ್ಯವಾಗಿವೆ. ಎಷ್ಟೇ ಗೊಬ್ಬರ ಹಾಕಿದರೂ ಇಳುವರಿ ಕಡಿಮೆ ಬರುತ್ತಿದೆ. ಕಾರಣ ಸಾವಯವ ಕೃಷಿಯ ಉಪಯೋಗ ಕಡಿಮೆ ಇರುವುದು. ಜನಸಂಖ್ಯೆ ಹೆಚ್ಚಾದಂತೆ ಜಮೀನುಗಳು ಕಡಿಮೆಯಾಗುತ್ತಿವೆ. ಇಸ್ರೇಲ್ ರಾಷ್ಟ್ರದಲ್ಲಿ ಒಂದು ಇಂಚು ನೀರು ಮಳೆ ಬೀಳುತ್ತಿದೆ. ಯುರೋಪ್ ದೇಶಗಳಲ್ಲಿ ನೀರನ್ನು ಸಂಸ್ಕರಿಸಿ ಶುದ್ಧಿಕರಿಸಿ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ನಮ್ಮಲ್ಲಿ ನೀರಿನ ಕೊರತೆ ಬಾರದಂತೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡು ಕೃಷಿಯನ್ನು ಲಾಭದಾಯಕ ರೂಪದಲ್ಲಿ ನೋಡಿದರೆ ಸದುಪಯೋಗ ಹೇಗೆ ಮಾಡಬೇಕೆಂದು ಗೊತ್ತಾಗುತ್ತದೆ. ಅಂತರಾಷ್ಟ್ರೀಯ ಸಿರಿಧಾನ್ಯಗಳ ಕಾರ್ಯಕ್ರಮ ಮಾಡುತ್ತಿದ್ದೇವೆ ಇಲ್ಲಿನ ರೈತರು ಸಿರಿಧಾನ್ಯಗಳ ಬೆಳೆ ಬೆಳೆಯುವ ಮಾಹಿತಿಯನ್ನು ಪಡೆದುಕೊಳ್ಳಿ. ಪ್ರತಿಯೊಂದು ವಿಭಾಗದವರು ತಮ್ಮ ಮಾರುಕಟ್ಟೆಗಳಲ್ಲಿ ನಿರ್ಧಿಷ್ಟ ದರಗಳನ್ನು ನಿರ್ಧರಿಸಿ ಪಡೆಯುತ್ತಾರೆ. ಆದರೆ ರೈತ ಉತ್ಪಾದನೆಯಲ್ಲಿ ನಿರ್ಧಿಷ್ಟ ಬೆಲೆಯನ್ನು ನಿಗದಿ ಮಾಡಿರುವುದಿಲ್ಲ. ಆದ್ದರಿಂದ ಒಗ್ಗೂಡಿದ ಕಾರ್ಯ ಮತ್ತು ನಿಗದಿತ ಬೆಳೆ ನಿರ್ಧಾರಗಳನ್ನು ಮಾಡಿ ರೈತರ ಸಮಸ್ಯೆಗಳನ್ನು ಎಲ್ಲಾ ರೈತರ ಸಹಕಾರದಿಂದ ಸಾಮೂಹಿಕವಾಗಿ ಒಗ್ಗೂಡಿ ಮಾಡಿ ಎಂದು ನುಡಿದರು.
ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಬಸವಾದಿ ಶರಣರಿಂದ ಸಾಗಿ ಬಂದಿರುವ ಮಠ ಶ್ರೀಮರುಘಾಮಠ. ಮುರುಘಾ ಪರಂಪರೆಯ ಸ್ವಾಮಿಗಳು ಸಾಹಿತ್ಯ ಪಂಡಿತರು. ಸಂದರ್ಭ ಬಂದಾಗ ರಾಜರುಗಳನ್ನು ವಿರೋಧಿಸುವವರು ಆಗಿದ್ದರು. ಅಪರೂಪದ ಪ್ರಜ್ಞೆಯನ್ನು ಬೆಳಗಿದವರು ಎಂದು ನುಡಿದರು.
ಪ್ರಗತಿಪರ ರೈತರಾದ ದೇವರಮರಿಕುಂಟೆ ಅರ್.ಎ. ದಯಾನಂದಮೂರ್ತಿ ಮಾತನಾಡಿ, ನಾನು 5 ಎಕರೆ ಜಮೀನಿನಲ್ಲಿ 1000 ಸಾವಿರ ಅಡಿಕೆ, 1000 ಸಾವಿರ ಬಾಳೆ ಹಾಗೂ ಸಿಲಾವರ್, ಹೆಬ್ಬೇವು, ಮಾವು-ಹಲಸು ಹೀಗೆ ವಿವಿಧ ರೀತಿ ತಳಿಯ ಗಿಡಗಳನ್ನು ಬೆಳೆದು ತೋರಿಸಿದ್ದೇನೆ. ಇವೆಲ್ಲದಕ್ಕೂ ಸಾಯವಯ ಕೃಷಿ ಕಾರಣವಾಗಿದೆ. ಆದ್ದರಿಂದಲೇ ಅನೇಕ ಪ್ರಶಸ್ತಿಗಳು ನನಗೆ ದೊರೆತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರಮಠದ ಶ್ರೀ. ಮ. ನಿ. ಪ್ರ. ಶ್ರೀ. ಮಹಾಂತ ರುದ್ರೇಶ್ವರಸ್ವಾಮಿಗಳು, ಶರಣ ಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಬಸವ ಸಮಿತಿ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ ಎಸ್ ರೇಖಾ, ಕೆ.ಪಿ.ಟಿ.ಸಿ.ಎಲ್‍ನ ನಿವೃತ್ತ ನಿರ್ದೇಶಕರಾದ ಕೆ.ವಿ.ಶಿವಕುಮಾರ್, ಚಿತ್ರದುರ್ಗ ಭಾ.ಜ.ಪ ಯುವ ಮುಂಖಡರಾದ ಶ್ರೀ ಜಿ.ಎಸ್. ಅನಿತ್ ಕುಮಾರ್, ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷರಾದ ಸಿದ್ದವೀರಪ್ಪ ಈಚಘಟ್ಟ, ಶರಣ ಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷರಾದ ಕೆ.ಸಿ.ನಾಗರಾಜ್, ಜಂಟಿ ನಿರ್ದೇಶಕರಾದ ಮಂಜುನಾಥ್, ಡಯಟ್‍ನ ಶ್ರೀ ಶಿವಾನಂದ್ ಎಸ್‍ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿಗಳಾದ ಎಂ.ಭರತ್ ಕುಮಾರ್ ಹಾಗೂ ಹರಚರಗುರುಮೂರ್ತಿಗಳು ಉಪಸ್ಥಿತರಿದ್ದರು. ವಿವಿಧ ಮಠಾಧೀಶರು ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಚಿತ್ರದುರ್ಗದ ಕೃಷಿ ಇಲಾಖೆಯ ಸಿರಿಧಾನ್ಯ ಪ್ರದರ್ಶನ, ಕೃಷಿ ಹಾಗೂ ಜಲಾನಯನ ಇಲಾಖೆಯ ಜಲಸಂಪನ್ಮೂಲ ಬಳಕೆಯ ಮಾದರಿ, ರೇಷ್ಮೆ ಇಲಾಖೆಯ ರೇಷ್ಮೆ ಸಾಗಣೆ, ಆಯುಷ್ ಇಲಾಖೆಯ ಆರ್ಯುವೇದದ ಕುರಿತು ಮಾಹಿತಿ, ತೋಟಗಾರಿಕೆ ಇಲಾಖೆಯ ರೈತ ಮಿತ್ರ ಹಾಗೂ ಯಂತ್ರೋಪಕರಣರ ಬಳಕೆ ಮತ್ತು ಬರಗಾಲದಲ್ಲಿ ತೋಟಗಾರಿಕೆ ವಿಧಾನ, ಮೀನುಗಾರಿಕೆ ಇಲಾಖೆಯ ಮೀನು ಸಾಕಾಣಿಕೆ ಬಗ್ಗೆ ಮಾಹಿತಿ, ಸಾಮಾಜಿಕ ಅರಣ್ಯ ವಿಭಾಗದ ಸಸಿಗಳ ಮಾಹಿತಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆÉಯ ರೇಬಿಸ್ ಲಸಿಕಾ ಅಭಿಯಾನ ಮಾಹಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮುತ್ತಯ್ಯನಹಟ್ಟಿ ಗೃಹಪಯೋಗಿ ವಸ್ತುಗಳು, ಎಸ್.ಜೆ.ಎಂ. ತಾಂತ್ರಿಕ ವiಹಾವಿದ್ಯಾಲಯದ ಜಿಲ್ಲಾ ಜೈವಿಕ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ಬುಸ್ನೂರು ಸೈಕಲ್ಸ್‍ರವರ ಸೈಕಲ್ ಫಿಟ್‍ನೆಸ್, ವರ್ಷಾ ಅಸೋಸಿಯೇಟ್ಸ್‍ರವರ ಕೃಷಿ ಯಂತ್ರೋಪಕರಣ, ರುಡ್ ಸೆಟ್ ಸಂಸ್ಥೆ, ಕನ್ನಡಾಂಬೆ ಪ್ರಕಾಶನ, ಬೆಂಗಳೂರು ಇವರ ಪುಸ್ತಕ ಮಳಿಗೆ ಪಾಲ್ಗೊಂಡಿದ್ದವು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ದೇವರಮರಿಕುಂಟೆ ಅರ್.ಎ. ದಯಾನಂದಮೂರ್ತಿ ಹಾಗೂ ಚಳ್ಳಕರೆಯ ಕೆ.ಎಂ.ವಿಜಯ ಇವರುಗಳನ್ನು ಸನ್ಮ್ಮಾನಿಸಲಾಯಿತು.
ಸಾಂಸ್ಕøತಿಕ ಸಂಭ್ರಮದಲ್ಲಿ ಚಿತ್ರದುರ್ಗದ ನಾಟ್ಯ ರಂಜಿನಿ ನೃತ್ಯ ಕಲಾಕೇಂದ್ರ, ರಂಗಭಂಢಾರ ಕಲಾ ಸಂಘದವರು ಕಲಾ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಶ್ರೀ ವೀರೇಂದ್ರಕುಮಾರ್ ಸ್ವಾಗತಿಸಿ, ಶ್ರೀಮತಿ ನೇತ್ರಾವತಿ ಎಸ್ ಆರ್ ನಿರೂಪಿಸಿ ವಂದಿಸಿದರು.
ಕೃಷಿಮೇಳದ ಬಹುಮಾನ ವಿಜೇತರು : ಕೃಷಿಇಲಾಖೆ ಚಿತ್ರದುರ್ಗ-ಪ್ರಥಮ ಸ್ಥಾನ, ತೋಟಗಾರಿಕೆ ಇಲಾಖೆ-ದ್ವಿತೀಯ ಸ್ಥಾನ, ರೇಷ್ಮೆ ಇಲಾಖೆ ತೃತೀಯ ಸ್ಥಾನ ಹಾಗೂ ಮೀನುಗಾರಿಕೆ ಇಲಾಖೆ ಸಮಾಧಾನಕರ ಬಹುಮಾನ ಪಡೆದವು.