ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾದ ಮೇಲೆ ಹಲವು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಅನ್ನಭಾಗ್ಯ ಕೂಡ ಒಂದು. ಆದರೆ ಅನ್ನಭಾಗ್ಯ ಯೋಜನೆ ಶುರುವಾದಾಗಿನಿಂದ ಕೊಟ್ಟ ಭರವಸೆಯಂತೆ 10 ಕೆಜಿ ನೀಡುತ್ತಿಲ್ಲ. ಬದಲಿಗೆ ಐದು ಕೆಜಿ ಅಕ್ಕಿ, ಇನ್ನು ಐದು ಕೆಜಿ ಅಕ್ಕಿಯ ಬದಲಿಗೆ ಹಣ ನೀಡಲಾಗುತ್ತಿದೆ. ಆದರೆ ಇತ್ತಿಚೆಗೆ ಹತ್ತು ಕೆಜಿ ಅಕ್ಕಿ ನೀಡಲಾಗುತ್ತದೆ ಎಂದೇ ಹೇಳಲಾಗಿತ್ತು. ಇದೀಗ ಇಂದಿನ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕಳೆದ ಎರಡು ತಿಂಗಳಿನಿಂದ ನೀಡುವಂತೆ ಐದು ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯ ಹಣವನ್ನೇ ನೀಡಲಾಗುತ್ತೆ ಎಂಬ ನಿರ್ಧಾರ ಕೈಗೊಂಡಿದ್ದಾರೆ. ಈ ಸಂಬಂಧ ಮಾತನಾಡಿರುವ ಆಹಾರ ಸಚಿವ ಕೆ ಎಚ್ ಮುನಿಯಪ್ಪ, ಎಲ್ಲಿಯವರೆಗೂ ಅಕ್ಕಿ ಸಿಗಲ್ಲ, ಅಲ್ಲಿಯವರೆಗೂ ಹಣ ಕೊಡ್ತೀವಿ. ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬೆಲೆ ಜಾಸ್ತಿ ಇದೆ. ನಮ್ಮ ದರಕ್ಕೆ ಅಕ್ಕಿ ಸಿಕ್ತಾ ಇಲ್ಲ. ಹೀಗಾಗಿ ಸದ್ಯಕ್ಕೆ ಅಕ್ಕಿ ನೀಡುವ ತನಕ ಹಣವನ್ನೇ ನೀಡುತ್ತೀವಿ ಎಂದಿದ್ದಾರೆ.