ಬಿಜೆಪಿ ರಾಜ್ಯಾಧ್ಯಕ್ಷೆಯಾಗಿ ಶೋಭಾ ಕರಂದ್ಲಾಜೆ ಆಯ್ಕೆಯಾಗ್ತಾರಾ..?

1 Min Read

 

ಲೋಕಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿವೆ. ಇತ್ತ ಬಿಜೆಪಿಯಲ್ಲಿ ಇನ್ನು ಕೂಡ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆಯೇ ಆಗಿಲ್ಲ. ಅಧಿವೇಶನದಲ್ಲೂ ವಿರೋಧ ಪಕ್ಷ ನಾಯಕನಿಲ್ಲದೆ ಮುಗಿದು ಹೋಗಿದೆ. ಇದೀಗ ಲೋಕಸಭಾ ಚುನಾವಣೆಗೂ ಮುನ್ನ, ಮೊದಲು ರಾಜ್ಯಾಧ್ಯಕ್ಷರ ಆಯ್ಕೆ‌ ಮಾಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿ ಶೋಭಾ ಕರಂದ್ಲಾಜೆ ಹೆಸರು ಫೈನಲ್ ಆಗಿದೆ ಎನ್ನಲಾಗುತ್ತಿದೆ.

ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷೆಯಾಗಿ ಮಾಡುವುದಕ್ಕೆ ಒಪ್ಪಿಗೆ ಕೂಡ ಸಿಕ್ಕಂತೆ ಆಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಹಂಬಲವಿತ್ತು. ಅದನ್ನು ಈಗಾಗಲೇ ಹೈಕಮಾಂಡ್ ಕಿವಿಗೂ ಮುಟ್ಟಿಸಿದ್ದರು. ಆದರೂ ವಿರೋಧಗಳು ಬರಬಾರದು ಎಂಬ ಕಾರಣಕ್ಕೆ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆ ಮಾಡಲಾಗಿದೆ. ಒಂದು ವೇಳೆ ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆ ಅಧ್ಯಕ್ಷೆಯಾದರೆ ಮೊದಲ ಮಹಿಳಾ ಅಧ್ಯಕ್ಷೆಯಾಗುತ್ತಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿರುವ ಬಿಜೆಪಿ, ಒಕ್ಕಲಿಗರ ಮತವನ್ನು ಸೆಳೆಯುವ ಪ್ಲ್ಯಾನ್ ರೂಪಿಸಿದೆ. ಶೋಭಾ ಕರಂದ್ಲಾಜೆಯವರನ್ನು ನೇಮಕ ಮಾಡುವುದರಿಂದ ಒಕ್ಕಲಿಗರ ಮತಬ್ಯಾಂಕ್ ಅನ್ನು ಟಚ್ ಮಾಡಿದಂತೆ ಆಗುತ್ತದೆ. ಜೊತೆಗೆ ಜೆಡಿಎಸ್ ಕೂಡ ಕೈ ಜೋಡಿಸುತ್ತಿರುವ ಕಾರಣ, ಒಕ್ಕಲಿಗರ ಮತಗಳ ಕ್ರೂಢೀಕರಣ ಹೆಚ್ಚಾಗುತ್ತದೆ ಎಂಬ ಆಲೋಚನೆಯೇ ಆಗಿದೆ. ಹೀಗಾಗಿ ಹೈಕಮಾಂಡ್ ಕಡೆಯಿಂದ ಎಲ್ಲಾ ರೀತಿಯ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅನೌನ್ಸ್ ಮಾಡುವುದೊಂದೆ ಬಾಕಿ ಇದೆ.

ಇನ್ನು ವಿರೋಧ ಪಕ್ಷದ ನಾಯಕ ಆಯ್ಕೆಯೂ ಆಗಬೇಕಾಗಿದೆ. ಸದ್ಯಕ್ಕೆ ಬಸವರಾಜ್ ಬೊಮ್ಮಾಯಿ ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ಕಾರಣ, ಈಗ ಬೇಡ ಎಂದು ಸುಮ್ಮನಾಗಿದ್ದಾರೆ ಎನ್ನಲಾಗಿದೆ. ಅವರ ಆರೋಗ್ಯದ ಸ್ಥಿತಿ ಸರಿಯಾದ ಮೇಲೆ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಬಹುದು.

Share This Article
Leave a Comment

Leave a Reply

Your email address will not be published. Required fields are marked *