ಸುದ್ದಿಒನ್ : ವಿಶ್ವಕಪ್ 2023ರ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವಿನ ಯಾತ್ರೆ ಮುಂದುವರೆದಿದೆ. ಈಗಾಗಲೇ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ರೋಹಿತ್ ನಾಯಕತ್ವದ ಭಾರತ ತಂಡ ಈಗ ನಾಲ್ಕನೇ ಗೆಲುವು ದಾಖಲಿಸಿದೆ. ವಿರಾಟ್ ಕೊಹ್ಲಿ ಶತಕ ಗಳಿಸಿ 7 ವಿಕೆಟ್ ಗಳ ಜಯ ಸಾಧಿಸಿದರು.
ಈ ಮೆಗಾ ಟೂರ್ನಿಯಲ್ಲಿ ಭಾರತದ ಪರವಾಗಿ ಎರಡನೇ ಶತಕ ದಾಖಲಾಗಿದೆ. (ಅಫ್ಘಾನಿಸ್ತಾನ ವಿರುದ್ಧ ರೋಹಿತ್ ಶರ್ಮಾ ಶತಕ (131) ಮತ್ತು ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 103 ). ತಮ್ಮದೇ ಶೈಲಿಯಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯವನ್ನು ಸಿಕ್ಸರ್ ನೊಂದಿಗೆ ಅಂತ್ಯಗೊಳಿಸಿದ್ದಲ್ಲದೆ, ಮತ್ತೊಂದು ಶತಕವನ್ನು ತಮ್ಮ ಖಾತೆಗೆ ಸೇರಿಸಿಕೊಂಡು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು 77ಕ್ಕೆ ಹೆಚ್ಚಿಸಿಕೊಂಡರು. ಈ ಮೂಲಕ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಕೊಹ್ಲಿ ಪಾಲಾಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ತಂಜಿದ್ ಹಸನ್ (51) ಮತ್ತು ಲಿಟನ್ ದಾಸ್ (66) ರನ್ ಗಳಿಸಿ ಮಿಂಚಿದರು. ಭಾರತದ ಬೌಲರ್‌ಗಳಲ್ಲಿ ಬುಮ್ರಾ, ಸಿರಾಜ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಬಳಿಕ 257 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಶತಕದಿಂದ ಸುಮಾರು 9 ಓವರ್‌ಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ರೋಹಿತ್ ಶರ್ಮಾ (48) ಮತ್ತು ಶುಭಮನ್ ಗಿಲ್ (53) ಕೂಡ ಮಿಂಚಿದರು. ಕ್ರೀಸ್ ಗೆ ಬಂದ ಬಳಿಕ ವಿರಾಟ್ ತಮ್ಮ ಎಂದಿನ ಶೈಲಿಯಲ್ಲೇ ಸಿಡಿದೆದ್ದರು. ಶತಕ ಸಿಡಿಸುವ ಮೂಲಕ ಅಜೇಯರಾಗಿ ಉಳಿದು ಟೀಂ ಇಂಡಿಯಾಗೆ ಜಯ ತಂದುಕೊಟ್ಟರು. ವಿರಾಟ್ ಕೊಹ್ಲಿ ಅಬ್ಬರದಿಂದ ಟೀಂ ಇಂಡಿಯಾ 41.3 ಓವರ್‌ಗಳಲ್ಲಿ ಅಮೋಘ ಜಯ ಸಾಧಿಸಿತು.
ವಿರಾಟ್ ಕೊಹ್ಲಿ 97 ಎಸೆತಗಳಲ್ಲಿ 103 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯಲ್ಲಿ ಸಿಕ್ಸ್ ಗಳಿಸುವ ಮೂಲಕ ಅತ್ತ ಅವರು ಶತಕವನ್ನು ದಾಖಲಿಸಿದರು. ಇತ್ತ ಪಂದ್ಯವನ್ನೂ ಗೆಲ್ಲಿಸಿದರು.