ಸಿಂದಗಿ: ಇದು ಕೇವಲ ಉಪ ಚುನಾವಣೆಯಲ್ಲ. ಇದು ಸುಳ್ಳು ಹಾಗೂ ಸತ್ಯದ ನಡುವಿನ ಯುದ್ಧ. ಬಿಜೆಪಿಯವರು ಸುಳ್ಳಿನ ಮೇಲೆ ಮನೆ ಕಟ್ಟಲು ಹೊರಟಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿಯವರು ಜನರಿಗೆ ಏನಾದರೂ ನೆರವು ನೀಡಿದ್ದರೆ ಅದರ ಪಟ್ಟಿ ನೀಡಲಿ.ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವರ ಸಂಪುಟದಲ್ಲಿ ಎಚ್. ಆಂಜನೇಯ ಅವರನ್ನು ಸಚಿವರನ್ನಾಗಿ ಮಾಡಿ ಭಾರತ ಸಂವಿಧಾನದ ಆಶಯದಂತೆ ನಡೆದುಕೊಂಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳಿಗೆ ಜನಗಣತಿ ಆಧಾರದ ಮೇಲೆ ಅನುದಾನ ನೀಡಬೇಕು ಎಂಬ ಕಾನೂನು ದೇಶದಲ್ಲಿ ತಂದಿದ್ದರೆ ಅದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ.
ಬಿಜೆಪಿಯವರು ಇಂತಹ ಒಂದು ತೀರ್ಮಾನ ಮಾಡಿದ್ದರೆ ಹೇಳಲಿ. ಒಂದು ವೇಳೆ ಅವರು ಮಾಡಿದ್ದರೆ ಚುನಾವಣಾ ಭಾಷಣವೇ ಅಗತ್ಯವಿಲ್ಲ. ಬಾಬು ಜಗಜೀವನ್ ರಾಮ್ ಅವರಂತಹ ಮಹಾನ್ ನಾಯಕರು ಕಾಂಗ್ರೆಸ್ ನಲ್ಲಿ ಬೆಳೆದವರು. ಅವರ ಪುತ್ರಿ ಮೀರಾ ಕುಮಾರ್ ಅವರು ಲೋಕಸಭೆ ಸ್ಪೀಕರ್ ಆಗಿದ್ದವರು. ನಾವು ಎಲ್ಲ ವರ್ಗದವರಿಗೆ ಅಧಿಕಾರ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುತ್ತಿದ್ದೇವೆ.
ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 7 ವರ್ಷವಾಗಿದ್ದು, ಕೇಂದ್ರ ಸರ್ಕಾರದ ಸಚಿವರು ನಿಮಗೆ ಕಷ್ಟದ ಸಮಯದಲ್ಲಿ ಏನಾದರೂ ಶ್ರಮ ವಹಿಸಿದ್ದಾರಾ? ಬಡವರಿಗಾಗಿ ಎಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ?. ಬಿಜೆಪಿ ಶಕ್ತಿ ಕೇವಲ ನೋಟಿನಲ್ಲಿದೆ. ನಿಮ್ಮನ್ನು ಖರೀದಿಸಲು ಮುಂದಾಗುತ್ತಾರೆ. ಅವರು ಉತ್ತಮ ಆಡಳಿತ ನೀಡಿಲ್ಲ. ಬಡವರು, ರೈತರಿಗೆ ನೆರವು ನೀಡಿಲ್ಲ ಎಂದರು.