ಬೆಂಗಳೂರು: ಲೋಕಸಭಾ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿದ್ದರು. ಇದರ ಪರಿಣಾಮ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದ ಇಬ್ರಾಹಿಂ ಅವರನ್ನು ಜೆಡಿಎಸ್ ವರಿಷ್ಠರು ಉಚ್ಛಾಟನೆ ಮಾಡಿದ್ದಾರೆ. ಕುಮಾರಸ್ವಾಮಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ವಿಚಾರಕ್ಕೆ ಆಕ್ರೋಶಗೊಂಡಿರುವ ಸಿ ಎಂ ಇಬ್ರಾಹಿಂ, ದೇವೇಗೌಡರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ನನ್ನನ್ನು ಕೆಣಕ್ಕಿದ್ದೀರಿ ಗೌಡ್ರೇ, ಮುಂದಿನ ಪರಿಣಾಮ ನೋಡಿಕೊಳ್ಳಿ ಎಂದೇ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅವರಿಗೆ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವ ಅಧಿಕಾರವಿಲ್ಲ. ಮೊದಲು ನನಗೆ ನೋಟೀಸ್ ಕೊಡಬೇಕು. ಕಾರ್ಯಕಾರಿ ಸಮಿತಿಯ ಸದಸ್ಯರ ಅನುಮತಿ ಪಡೆದು ನೋಟೀಸ್ ನೀಡಬೇಕು. ದೇವೇಗೌಡರು ಯಾರನ್ನು ಬೆಳೆಯಲು ಬಿಡಲಿಲ್ಲ. ಎಲ್ಲಾ ನನಗೆ, ನನ್ನ ಮಕ್ಕಳಿಗೆ ಅಂತ ಇರುವವರು ಗೌಡರು. ಒಕ್ಕಲಿಗರನ್ನು ಯಾರನ್ನೂ ಬೆಳೆಸಲಿಲ್ಲ ಎಂದು ಕಿಡಿಕಾರಿದ್ದಾರೆ.
ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಬೈಯ್ಯುತ್ತಿಲ್ಲ ಎಂಬ ಬೇಸರ ಗೌಡರಲ್ಲಿದೆ. ಸುಮ್ಮ ಸುಮ್ಮನೆ ನಾನ್ಯಾಕೆ ಸಿದ್ದರಾಮಯ್ಯ ಅವರನ್ನು ಬೈಯ್ಯಲಿ..? ಸಿದ್ದರಾಮಯ್ಯ ಅವರ ಪಾಡಿಗೆ ಅವರು ಅಧಿಕಾರ ನಡೆಸುತ್ತಿದ್ದಾರೆ. ನಾನು ಮೋದಿಗೂ ಬೈದಿಲ್ಲ. ಕಾಂಗ್ರೆಸ್ ಬಿಟ್ಟಿದ್ದು ನನಗೆ ತಪ್ಪು ಅಂತ ಏನು ಅನ್ನಿಸಿಲ್ಲ. ದೇವೇಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡ್ವಾ. ನಾನು ಹಿರಿಯ, ಪರಿಷತ್ ಸದಸ್ಯ ಸ್ಥಾನ ಬಿಟ್ಟು ಬಂದಿದ್ದೀನಿ. ನಾಲ್ಕು ವರ್ಷದ ಕಾಂಗ್ರೆಸ್ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದಿದ್ದೀನಿ. ನನ್ನ ಜೊತೆ ಮಾತನಾಡಬೇಕು ಅಂತ ನಿಮಗೆ ಅನ್ನಿಸಲಿಲ್ವಾ. ಬಹುತೇಕ ಶಾಸಕರು ನಮ್ಮ ಜೊತೆಗೆ ಇದ್ದಾರೆ. ಸಮಯ ಸಂದರ್ಭ ಬಂದಾಗ ಸಭೆ ಕರೆಯುತ್ತೇನೆ ಎಂದಿದ್ದಾರೆ.