ಸುದ್ದಿಒನ್, ಚಿತ್ರದುರ್ಗ : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮಂಗಳವಾರ ಸಂಜೆ 5.30 ಗಂಟೆಗೆ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ 33ನೇ ಪದವಿ ಪ್ರದಾನ ಸಮಾರಂಭ ನಡೆಯಿತು.
ಮುಖ್ಯ ಅತಿಥಿ ಡಾ. ಶಿವಶರಣ್ ಶೆಟ್ಟಿ ಕೆ. ಸದಸ್ಯರು, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿ ಇವರು ಮಾತನಾಡುತ್ತ, ನೀವು ಈಗ ವೈದ್ಯರಾಗಿ ಪ್ರಪಂಚಕ್ಕೆ ಕಾಲಿಡುತ್ತಿದ್ದೀರಿ. ಜಗತ್ತು ನಿಮ್ಮನ್ನು ಸ್ವಾಗತಿಸುತ್ತಿದೆ.
ಪ್ರಯೋಗಾಲಯದಲ್ಲಿ ತಾವು ಅನುಭವಿಸಿದ ನೋವುಗಳು ಇಂದು ಮಾಯವಾಗಿವೆ. ವೈಜ್ಞಾನಿಕ ಯುಗಕ್ಕೆ ನೀವು ಹೊಂದಿಕೊಳ್ಳುತ್ತ, ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳಿಗೆ ಒಳಗಾಗಬೇಕು.
3ಡಿ ತರಹದ ಹೊಸ ತಂತ್ರಜ್ಞಾನವನ್ನು ಬಳಸುವ ಜ್ಞಾನ ರೂಢಿಸಿಕೊಳ್ಳಬೇಕು. ಈಗ ಪದವಿ ನಿಮ್ಮ ಕೈಲಿದ್ದು, ನಿಮ್ಮ ಕೌಶಲ್ಯ ಬಳಿಸಿರಿ. ಬಂದಂತಹ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸಿದರೆ ಅವರ ಅರ್ಧ ರೋಗ ಕಡಿಮೆಯಾಗುತ್ತದೆ. ನಿಮ್ಮ ಪ್ರಯಾಣ ಆರಂಭಗೊಂಡಿದ್ದು, ಹೊಸ ಆವಿಷ್ಕಾರಗಳೊಂದಿಗೆ ನಿಮ್ಮ ಮುಂದಿನ ದಾರಿ ಸಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಾಧಿಕಾರಿ ಶ್ರೀಮತಿ ಬಿ.ಎಸ್. ರೇಖಾ ಅವರು ಮಾತನಾಡುತ್ತ, ಸತ್ಯದ ಆಲೋಚನೆಗಳು ವೈದ್ಯರಿಗಿರಬೇಕು. ನನ್ನ ಕುಟುಂಬವು ಸಹ ವೈದ್ಯರ ಕುಟುಂಬ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಯಾವುದೇ ಅಸಹ್ಯ ಭಾವನೆ ಮೂಡಬಾರದು. ಪ್ರೀತಿಯಿಂದ ಅವರಿಗೆ ಚಿಕಿತ್ಸೆ ನೀಡಬೇಕು. ನಿಮ್ಮ ಪೋಷಕರಿಗೆ ನೀವು ಹೆಮ್ಮೆಯಾಗಬೇಕು. ನಿಮ್ಮ ಪೋಷಕರಿಗೆ ಗೌರವ ತರುವ ಕೆಲಸ ಮಾಡಬೇಕು. ಪದವಿ ಪ್ರಮಾಣ ಪತ್ರಗಳನ್ನು ಜಾಗರೂಕತೆಯಿಂದ ಇಟ್ಟಿಕೊಳ್ಳಿ. ದಾಖಲೆಗಳು ಬಹಳ ಮುಖ್ಯ ಎಂದು ಹೇಳಿದರು.
ಶ್ರೀ ಬಸವ ಪ್ರಭು ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ಜೆ.ಎಂ. ವಿದ್ಯಾಪೀಠದ ಸಿಇಒ ಎಂ. ಭರತ್‍ಕುಮಾರ್ ವೇದಿಕೆಯಲ್ಲಿದ್ದರು. ಎಸ್.ಜೆ.ಎಂ. ವಿದ್ಯಾಪೀಠದ ಹೆಚ್. ಆರ್. ಶ್ರೀಮತಿ ವಿಜಯ ಕೆ ಮಠ್, ಡಾ|| ರಘುನಾಥರೆಡ್ಡಿ, ಡಾ|| ನಾಗರಾಜಪ್ಪ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಇದ್ದರು.
ಕಾರ್ಯಕ್ರಮದಲ್ಲಿ ಇಬ್ಬರು ಸ್ನಾತಕೋತ್ತರ ಮತ್ತು 52 ವಿದ್ಯಾರ್ಥಿಗಳು ಸ್ನಾತಕ ಪದವಿ ಸೇರಿದಂತೆ ಒಟ್ಟು 54 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದುಕೊಂಡರು.
ಪ್ರಾಂಶುಪಾಲರಾದ ಡಾ|| ಗೌರಮ್ಮ ಸ್ವಾಗತಿಸಿದರು. ಡಾ|| ವಿನುತ – ಡಾ|| ದಿಶಾ ನಿರೂಪಿಸಿದರು.