ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.17: ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರ ಮೊಬೈಲ್ ಪತ್ತೆ ಮಾಡಿ ಹಸ್ತಾಂತರ ಮಾಡುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 50 ಮೊಬೈಲ್ ಫೋನ್ ಗಳನ್ನು ಹಸ್ತಾಂತರ ಮಾಡಲಾಯಿತು.
ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಮೊಬೈಲ್ ಹಸ್ತಾಂತರ ಕಾರ್ಯಕ್ರಮವನ್ನು ನಗರದ ಎಸ್.ಪಿ. ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರ ನೇತೃತ್ವದಲ್ಲಿ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
50 ಮೊಬೈಲ್ ಫೋನ್ ಹಸ್ತಾಂತರ : ಚಿತ್ರದುರ್ಗ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು CEIR ತಂತ್ರಾಂಶದ ಸಹಾಯದಿಂದ ದಿನಾಂಕ: 01.09.2023 ರಿಂದ ಇಲ್ಲಿಯವರೆಗೆ ಅಂದಾಜು ಮೌಲ್ಯ 5,00,000/-ಲಕ್ಷ ರೂ ಬೆಲೆ ಬಾಳುವ 50 ವಿವಿಧ ಕಂಪನಿಗಳ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿದ್ದು, ಪತ್ತೆಯಾಗಿರುವ ಮೊಬೈಲ್ ಗಳನ್ನು ಈ ದಿವಸ ವಾರಸುದಾರರಿಗೆ ಹಸ್ತಾಂತರಿಸಿದರು.
ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಾನ್ಯ ಎಸ್.ಜೆ.ಕುಮಾರಸ್ವಾಮಿ ಕೆ.ಎಸ್.ಪಿ.ಎಸ್ ಹಾಗೂ ಡಿ.ಸಿ.ಆರ್.ಬಿ. ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಲೋಕೇಶ್ವರಪ್ಪ.ಎನ್. ಅವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.
ಸಾರ್ವಜನಿಕರ ಮೊಬೈಲ್ ಪತ್ತೆಗೆ ಶ್ರಮಿಸಿದ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎನ್.ವೆಂಕಟೇಶ್ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಮಲಿಕಾರ್ಜುನಯ್ಯ, ಸಿಪಿಸಿ-2067 ಭೀಮನಗೌಡ ಪಾಟೀಲ್, ಸಿಪಿಸಿ- 2659 ಗಗನ್ ದೀಪ್ ಪವಾರ್, ಮಪಿಸಿ-2625 ಶಾಂತಲಾ ಇವರ ಕಾರ್ಯವನ್ನು ಶಾಘಿಸಿರುತ್ತಾರೆ.