ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದಕ್ಕೆ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ನೇರವಾಗಿಯೇ ಬೇಸರ ಹೊರ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಒರಿಜಿನಲ್ ಜೆಡಿಎಸ್ ನಮ್ಮದೆ ಎಂಬ ಚರ್ಚೆ ಹುಟ್ಟು ಹಾಕಿದ್ದಾರೆ. ನಿನ್ನೆಯಷ್ಟೇ ಕುಮಾರಸ್ವಾಮಿ ಅವರನ್ನು ಉಚ್ಛಾಟನೆ ಮಾಡುವ ಬಗ್ಗೆ ಅಭಿಪ್ರಾಯಗಳು ಕೇಳಿ ಬರುತ್ತಿವೆ ಎಂದಿದ್ದರು. ಕುಮಾರಸ್ವಾಮಿ ಅವರನ್ನು ಉಚ್ಛಾಟನೆ ಮಾಡುವ ಮಾತುಗಳನ್ನು ಆಡಿದ್ದರು. ಈ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಇಬ್ರಾಹಿಂ ಸಹಿಯೊಂದಿಗೆ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಉಚ್ಛಾಟನೆ ಮಾಡಿರುವ ಪತ್ರವೊಂದು ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಪತ್ರ ವೈರಲ್ ಆಗಿದೆ.
ಇದೀಗ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂಬ ಪತ್ರದಲ್ಲಿ ಈ ರೀತಿ ಇದೆ. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿ ಎಂ ಇಬ್ರಾಹಿಂ, ಜೆಡಿಎಸ್ ಪಕ್ಷವೂ ದಶಕಗಳಿಂದ ಜಾತ್ಯಾತೀತ ಸಿದ್ಧಾಂತವನ್ನು ಪಾಲಿಸುತ್ತಾ ಬಂದಿದ್ದು, ನಮ್ಮ ಪಕ್ಷದಲ್ಲಿ ಎಲ್ಲಾ ಜಾತಿ ಧರ್ಮಗಳ ನಾಯಕರು, ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದು, ಇತ್ತಿಚೆಗೆ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿಯಾಗಿರುವುದು ಕಂಡು ಬಂದಿದ್ದು, ಈ ತತ್ ತಕ್ಷಣದಿಂದ ಹೆಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನ ಉಚ್ಛಾಟಿಸಲು ಪಕ್ಷ ತೀರ್ಮಾನಿಸಲಾಗಿದೆ ಎಂದು ಪತ್ರದ ಮೂಲಕ ಆದೇಶ ಹೊರಡಿಸಿದ್ದಾರೆ.
ಇನ್ನು ಒರಿಜಿನಲ್ ಜೆಡಿಎಸ್ ನಮ್ಮದು ಎಂದಿದ್ದ ಇಬ್ರಾಹಿಂ ಗೆ ಕುಮಾರಸ್ವಾಮಿ ಹಾಗೂ ದೇವೇಗೌಡ್ರು ತಿರುಗೇಟು ನೀಡಿದ್ದರು. ಇದೀಗ ಉಚ್ಛಾಟನೆಯ ಪತ್ರಿಕಾ ಪ್ರಕಟಣೆಗೆ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ.