ಚಿತ್ರದುರ್ಗ ಅ. 17 : ಗೋವಾದಿಂದ ಕರ್ನಾಟಕ ರಾಜ್ಯಕ್ಕೆ ರೈಲುಗಳ ಮೂಲಕ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುವುದನ್ನು ತಡೆಗಟ್ಟಲು ಅಬಕಾರಿ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಬೇಕು, ಇದಕ್ಕೆ ಅಗತ್ಯವಿದ್ದಲ್ಲಿ ರೈಲ್ವೆ ಪೊಲೀಸರ ಸಹಕಾರ ಪಡೆಯಬೇಕು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಹೊಸಪೇಟೆ ಅಬಕಾರಿ ವಿಭಾಗ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಸಪೇಟೆ ಅಬಕಾರಿ ವಿಭಾಗ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ವರ್ಷ ಅಂದರೆ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗೆ ಹೊರರಾಜ್ಯದ ಒಟ್ಟು 615.6 ಲೀ. ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಗೋವಾ ರಾಜ್ಯದಿಂದ ರೈಲುಗಳ ಮೂಲಕ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುತ್ತಿರುವ ಬಗ್ಗೆ ದೂರುಗಳಿವೆ, ಹೀಗಾಗಿ ಗೋವಾದಿಂದ ರಾಜ್ಯದೊಳಗೆ ರೈಲು ಅಥವಾ ಇನ್ನಿತರ ಮಾರ್ಗಗಳ ಮೂಲಕ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುವುದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಗೋವಾ ರಾಜ್ಯದಿಂದ ರಾಜ್ಯಕ್ಕೆ ಆಗಮಿಸುವ ರೈಲುಗಳ ತಪಾಸಣೆ ಕಾರ್ಯ ಚುರುಕಾಗಬೇಕು, ಅಗತ್ಯವಿದ್ದಲ್ಲಿ ರೈಲ್ವೆ ಪೊಲೀಸರ ಸಹಕಾರ ಪಡೆಯಬೇಕು, ಆದರೆ ರೈಲಿನಲ್ಲಿ ಸ್ವಂತಕ್ಕಾಗಿ ಕೇವಲ ಒಂದೆರಡು ಬಾಟಲಿ ಮದ್ಯ ತೆಗೆದುಕೊಂಡು ಬರುವ ಪ್ರಯಾಣಿಕರಿಗೆ ತೊಂದರೆ ಕೊಡುವುದು ಬೇಡ, ಆದರೆ ಮಾರಾಟ ಉದ್ದೇಶ ಇಟ್ಟುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸಾಗಿಸಲು ಅವಕಾಶ ಮಾಡಿಕೊಡಬೇಡಿ ಎಂದು ಸಚಿವರು ಹೇಳಿದರು.
ಜಪ್ತಿ ಮಾಡಿದ ವಾಹನಗಳ ತ್ವರಿತ ವಿಲೇವಾರಿಗೆ ಸೂಚನೆ ಅಬಕಾರಿ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸಪೇಟೆ ಅಬಕಾರಿ ವಿಭಾಗ ವ್ಯಾಪ್ತಿಯಲ್ಲಿ ಈ ವರ್ಷ ಒಟ್ಟು 441 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ 247 ವಾಹನಗಳನ್ನು ವಿಲೇವಾರಿ ಮಾಡುವುದು ಬಾಕಿ ಇದೆ ಎಂದು ಹೊಸಪೇಟೆ ಅಬಕಾರಿ ವಿಭಾಗದ ಜಂಟಿ ಆಯುಕ್ತ ಬಾಲಕೃಷ್ಣ ಅವರು ಸಭೆಯ ಗಮನಕ್ಕೆ ತಂದರು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್.ಬಿ. ತಿಮ್ಮಾಪುರ ಅವರು, ಅಬಕಾರಿ ಅಕ್ರಮ ಪ್ರಕರಣದಲ್ಲಿ ವಶಕ್ಕೆ ಪಡೆದ ಹಾಗೂ ಮುಟ್ಟುಗೋಲು ಹಾಕಿಕೊಂಡ ವಾಹನಗಳ ವಿಲೇವಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ವಿನಾಕಾರಣ ಇರಿಸಿಕೊಳ್ಳುವುದರಿಂದ ಯಾರಿಗೂ ಉಪಯೋಗವಿಲ್ಲ, ವಾಹನಗಳು ಮಳೆಗೆ ಸಿಲುಕಿ ಸಂಪೂರ್ಣ ಹಾಳಾಗುತ್ತವೆ, ಇದರಿಂದ ಅದರ ಮೌಲ್ಯವೂ ಕುಸಿದು, ವಾಹನಗಳ ಮಾಲೀಕರಿಗೆ ಹಾಗೂ ಸರ್ಕಾರಕ್ಕೂ ನಷ್ಟವೇ ಆಗುತ್ತದೆ. ಹೀಗಾಗಿ ತ್ವರಿತವಾಗಿ ವಾಹನಗಳ ವಿಲೇವಾರಿ ಮಾಡಲು ಯಾವುದಾದರೂ ನಿಯಮಗಳು ಅಡ್ಡಿಯಿದ್ದಲ್ಲಿ, ನಿಯಮಗಳಿಗೆ ತಿದ್ದುಪಡಿ ತಂದು, ಸರಳೀಕರಿಸಲಾಗುವುದು, ಒಟ್ಟಾರೆ ವಾಹನಗಳ ತ್ವರಿತ ವಿಲೇವಾರಿಯಾಗಬೇಕು, ಇದಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡ ಸಹಕಾರ ನೀಡಬೇಕಾಗುತ್ತದೆ ಎಂದರು.
ಗಾಂಜಾ ಬೆಳೆಯುವುದನ್ನು ಮಟ್ಟಹಾಕಿ : ಹೊಸಪೇಟೆ ವಿಭಾಗದಲ್ಲಿ ಈ ವರ್ಷ ಒಟ್ಟು 29 ಮಾದಕ ಪ್ರಕರಣಗಳು ವರದಿಯಾಗಿದ್ದು, 25 ಜನರನ್ನು ಬಂಧಿಸಲಾಗಿದೆ, ಅಲ್ಲದೆ ಈ ವರ್ಷ 15 ಜನರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದು ಅಬಕಾರಿ ಜಂಟಿ ಆಯುಕ್ತರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗಾಂಜಾ, ಅಫೀಮು ಎಂಬುದು ಮಾರಕವಾಗಿರುವ ಮಾದಕ ವಸ್ತುಗಳಾಗಿದ್ದು, ಗಾಂಜಾ ಬೆಳೆಯುವುದನ್ನು ಸಂಪೂರ್ಣ ಮಟ್ಟಹಾಕಬೇಕು, ಒಂದು ವೇಳೆ ಯಾರಾದರೂ ಗಾಂಜಾ ಬೆಳೆಯುವುದು ಕಂಡುಬಂದಲ್ಲಿ, ನಿರ್ದಾಕ್ಷಿಣ್ಯವಾಗಿ, ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಠಿಣ ಕ್ರಮ ಕೈಗೊಳ್ಳಬೇಕು. ಕಳ್ಳಭಟ್ಟಿಯ ಅಪಾಯದ ಬಗ್ಗೆ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದ ಸಚಿವರು, ಮಾದಕ ವಸ್ತುಗಳ ಪ್ರಕರಣದಲ್ಲಿ ಅತಿ ಹೆಚ್ಚು ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುವಂತಹ ಹಾಗೂ ದಕ್ಷತೆ ತೋರುವ ಉತ್ತಮ ಅಬಕಾರಿ ಅಧಿಕಾರಿಗಳನ್ನು ಗುರುತಿಸಿ, ಅಂತಹವರಿಗೆ ನೀಡುವ ಪ್ರೋತ್ಸಾಹ ಬಹುಮಾನ ಮೊತ್ತವನ್ನು ಹೆಚ್ಚಿಸುವುದಲ್ಲದೆ, ವಾರ್ಷಿಕವಾಗಿ ಅತ್ಯುತ್ತಮ ಅಬಕಾರಿ ಅಧಿಕಾರಿಯ ಪ್ರಶಸ್ತಿ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಅಬಕಾರಿ ಅಕಾಡೆಮಿಯ ಭರವಸೆ : ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕೂಡ ಕಡ್ಡಾಯವಾಗಿ ಪರೇಡ್ ಕವಾಯತು ನಡೆಸಬೇಕು, ದೈಹಿಕ ಶ್ರಮ ಹಾಕಬೇಕು, ದೈಹಿಕ ಸಾಮಥ್ರ್ಯ ಇಲ್ಲದಿದ್ದಲ್ಲಿ ಕರ್ತವ್ಯದಲ್ಲಿ ಚುರುಕುತನ ಬರುವುದಿಲ್ಲ, ಪ್ರಕರಣಗಳನ್ನು ಹೊಸ ಹೊಸ ಆಯಾಮದಲ್ಲಿ ತನಿಖೆ ನಡೆಸುವ ರೀತಿಯಲ್ಲಿ, ಸುಧಾರಿತ ಕ್ರಮಗಳ ಬಗ್ಗೆ ಆಗಾಗ್ಗೆ ತರಬೇತಿಗಳು ನಡೆಯಬೇಕು ಎಂದು ಸಚಿವರು ಹೇಳಿದರು. ಬಳ್ಳಾರಿ ಜಿಲ್ಲೆ ಅಬಕಾರಿ ಉಪ ಆಯುಕ್ತರು ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ನೇಮಕಾತಿಯ ಆರಂಭದಲ್ಲಿ ನೀಡುವ ಪೊಲೀಸ್ ಬುನಾದಿ ತರಬೇತಿಯ ಬಳಿಕ, ಯಾವುದೇ ತರಬೇತಿಯನ್ನು ನೀಡಲಾಗುತ್ತಿಲ್ಲ. ಪೊಲೀಸ್ ಇಲಾಖೆಯ ಮಾದರಿಯಲ್ಲಿ ಅಧಿಕಾರಿ, ಸಿಬ್ಬಂದಿಗೆ ಆಗಾಗ್ಗೆ ತರಬೇತಿಗಳನ್ನು ಆಯೋಜಿಸಬೇಕು, ಇದಕ್ಕಾಗಿ ಅಬಕಾರಿ ಅಕಾಡೆಮಿ ಸ್ಥಾಪಿಸುವ ಅಗತ್ಯವಿದೆ ಎಂದರು, ಇದಕ್ಕೆ ಇತರೆ ಜಿಲ್ಲೆಗಳ ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕೂಡ ದನಿಗೂಡಿಸಿದರು. ಪ್ರತಿಕ್ರಿಯಿಸಿದ ಸಚಿವರು, ಅಬಕಾರಿ ಅಕಾಡೆಮಿ ಸ್ಥಾಪಿಸುವ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
9619 ಅಬಕಾರಿ ದಾಳಿ : ಹೊಸಪೇಟೆ ಅಬಕಾರಿ ವಿಭಾಗ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ವರ್ಷ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣಿಕೆಗೆ ಸಂಬಂಧಿಸಿದಂತೆ ಒಟ್ಟು 9619 ದಾಳಿ ನಡೆಸಲಾಗಿದ್ದು, ಈ ಪೈಕಿ 631 ಘೋರ ಪ್ರಕರಣಗಳು, ಕಲಂ 15 ಎ ಅಡಿ 6352, ಬಿಎಲ್‍ಸಿ ನಡಿ 962, ಎನ್‍ಡಿಪಿಎಸ್ ನಡಿ 29 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 10491 ಆರೋಪಿಗಳನ್ನು ಬಂಧಿಸಿದ್ದು, 432 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 84001 ಲೀ. ಮದ್ಯ, 1.20 ಲಕ್ಷ ಲೀ. ಬಿಯರ್, 137 ಲೀ. ಸೇಂದಿ, 7.65 ಲೀ. ವೈನ್, 46.8 ಲೀ. ಕಳ್ಳಭಟ್ಟಿ, 170 ಲೀ. ಬೆಲ್ಲದ ಕೊಳೆ ಹಾಗೂ 615.6 ಲೀ. ಹೊರ ರಾಜ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೊಸಪೇಟೆ ಅಬಕಾರಿ ವಿಭಾಗದ ಜಂಟಿ ಆಯುಕ್ತ ಬಾಲಕೃಷ್ಣ ಅವರು ಸಭೆಗೆ ವಿವರ ನೀಡಿದರು.
ಸಭೆಯಲ್ಲಿ ಹೊಸಪೇಟೆ ಅಬಕಾರಿ ವಿಭಾಗದ ಜಂಟಿ ಆಯುಕ್ತ ಬಾಲಕೃಷ್ಣ, ಚಿತ್ರದುರ್ಗ ಜಿಲ್ಲೆ ಅಬಕಾರಿ ಉಪ ಆಯುಕ್ತ ಮಾದೇಶ್, ಅಬಕಾರಿ ಸಚಿವರ ಆಪ್ತ ಕಾರ್ಯದರ್ಶಿ ವಿನಾಯಕ ಪಾಲನಕರ್ ಸೇರಿದಂತೆ ಹೊಸಪೇಟೆ ಅಬಕಾರಿ ವಿಭಾಗ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಅಬಕಾರಿ ಇಲಾಖೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.