ವಿಜಯಪುರ: 2008-13ರ ನಡುವಿನ ರಾಜಕೀಯ ಬೆಳವಣಿಗೆಗಳನ್ನು ಒಮ್ಮೆ ಮೆಲುಕು ಹಾಕಿ. ಆಪರೇಷನ್ ಕಮಲದ ಮೂಲಕ ತೆರವಾದ ಇಪ್ಪತ್ತು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಾಗ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಒಳಸಂಚು ರೂಪಿಸಿದ್ದರು. ಆಗ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಹಿನ್ನಡೆಯಾಗಿ ಎಲ್ಲಡೆ ಬಿಜೆಪಿಯೇ ಗೆದ್ದಿತ್ತು ಎಂದು ಮಾಜಿ ಸಿಎಂ ಹೆಚ್‌ಡಿಕೆ ಹೇಳಿದರು.
ತಮ್ಮ ಆತ್ಮೀಯ ಸ್ನೇಹಿತರೊಬ್ಬರನ್ನು ಯಡಿಯೂರಪ್ಪ ಅವರ ಬಳಿಗೆ ಕಳಿಸಿ ಎಷ್ಟು ಕೋಟಿ ಪಡೆದುಕೊಂಡರು ಸಿದ್ದರಾಮಯ್ಯ ಎಂಬುದು ಗೊತ್ತಿದೆ. ನನ್ನ ಬಗ್ಗೆ ಸೂಟ್ʼಕೇಸ್ ಆರೋಪ ಮಾಡಿಸುತ್ತಾರಲ್ಲಾ? ಇಪ್ಪತ್ತು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎಷ್ಟು ಕಡೆ ಗೆದ್ದಿತು ಆಗ? ಆಗ ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಬಹಳ ದೊಡ್ಡದು. ಯಡಿಯೂರಪ್ಪ ಅವರಿಂದ ಅವರು ಕೋಟ್ಯಂತರ ರೂಪಾಯಿ ಪಡೆದರು. ಯಾರು ಯಡಿಯೂರಪ್ಪ ಅವರ ಬಳಿ ಹೋಗಿ ಹಣ ತೆಗೆದುಕೋಂಡು ಬಂದರೋ ಅವರೇ ನನ್ನ ಬಳಿ ಈ ವಿಷಯವನ್ನು ಹತ್ತಾರು ಸಲ ಹೇಳಿದ್ದಾರೆ. ಎಷ್ಟು ಹಣ ತಂದಿವೀ ಅಂತ ಕೂಡ ಹೇಳಿದ್ದಾರೆ. ನಾನು ಜಾತ್ಯತೀತ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ನಿಜವಾದ ಜಾತ್ಯತೀತ ಬಣ್ಣ ಇದು ಎಂದು ಕುಮಾರಸ್ವಾಮಿ ಅವರು ತೀವ್ರ ಪ್ರಹಾರ ನಡೆಸಿದರು.
2013ರಲ್ಲಿ ಕೇವಲ 40 ಸೀಟು ಪಡೆದಿದ್ದ ಬಿಜೆಪಿ ಅದೇ 2018ರಲ್ಲಿ 105 ಸೀಟು ಪಡೆಯಲು ಸಾಧ್ಯವಾಗಿದ್ದು ಹೇಗೆ? ಅದಾದ ಮೇಲೆ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸಿದ್ದು ಯಾರು? ಭೈರತಿ ಬಸವರಾಜು, ಮುನಿರತ್ನ, ಸೋಮಶೇಖರ್ ಅವರಂಥ ನಿಷ್ಠರು ಬಿಜೆಪಿಗೆ ಹೋಗಿದ್ದು ಯಾಕೆ? ಅಂದಿನ ಸಚಿವ ಜಾರ್ಜ್ ಮತ್ತು ಭೈರತಿ ಬಸವರಾಜ್ ನಡುವಿನ ಗಲಾಟೆಯನ್ನು ಸಿಎಲ್ʼಪಿ ನಾಯಕರಾಗಿಯೂ ಸರಿ ಮಾಡಲಿಲ್ಲ ಯಾಕೆ? ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಗೆ ಉಂಟಾದ ಅಸಮಾಧಾನವನ್ನು ಶಮನ ಮಾಡಲಿಲ್ಲ, ಕಾರಣವೇನು? ಎಂದು ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಮೇಲೆ ಗುಡುಗಿದರು.
ಕಾರ್ಯಾಗಾರ ಆದ ಮೇಲೆ ಜೆಡಿಎಸ್ ಪಕ್ಷವು ಜನರಿದಗೆ ಹತ್ತಿರವಾಗುತ್ತಿದೆ ಮಾತ್ರವಲ್ಲದೆ, ಉಪ ಚುಣಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಇದನ್ನು ಸಹಿಸಿಕೊಳ್ಳುವುದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ. ಈ ಕಾರಣಕ್ಕೆ ನಮ್ಮ ಮೇಲೆ ಸೂಟ್ʼಕೇಸ್ ಆರೋಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.