ಚಿತ್ರದುರ್ಗ. ಅ.13: ಐತಿಹಾಸಿಕ ಕಿತ್ತೂರು ಉತ್ಸವದ ಅಂಗವಾಗಿ ಕಿತ್ತೂರು ಚೆನ್ನಾಮ್ಮಾಜೀಯ ವಿಜಯ ವೀರಜ್ಯೋತಿ ಯಾತ್ರೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದ್ದು, ಯಾತ್ರೆಯ ರಥವು ತುಮಕೂರಿನ ಮಾರ್ಗವಾಗಿ ಶುಕ್ರವಾರ ಸಂಜೆ ಚಿತ್ರದುರ್ಗ ನಗರಕ್ಕೆ ಆಗಮಿಸಿತು.
ನಗರದ ಚಳ್ಳಕೆರೆ ಗೇಟ್ ಬಳಿ ಚೆನ್ನಾಮ್ಮಾಜಿಯ ವಿಜಯ ವೀರಜ್ಯೋತಿ ಯಾತ್ರೆ ರಥಕ್ಕೆ ಜಿಲ್ಲಾಡಳಿತದ ವತಿಯಿಂದ ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ತಹಶೀಲ್ದಾರ್ ಡಾ.ನಾಗವೇಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಕೆ.ಎಫ್.ಸಿ.ಎಸ್.ಸಿ ಸಹಾಯಕ ವ್ಯವಸ್ಥಾಪಕ ಎಂ.ಹನುಮಂತಪ್ಪ, ಮುಖಂಡರಾದ ಶ್ರೀನಿವಾಸ್, ಮೋಕ್ಷಾ ರುದ್ರಸ್ವಾಮಿ, ರೀನಾ ವೀರಭದ್ರಪ್ಪ, ಉಮಾ, ಪ್ರೇಮ, ಪಾರ್ವತಮ್ಮ, ಶ್ವೇತಾ ಹಾಗೂ ಅ.ಭಾ.ವೀ.ಲಿಂ ಮಹಿಳಾ ಘಟಕ, ಪಂಚಮಸಾಲಿ ಸಮಾಜ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಾಜಿಯ ಅಭಿಮಾನಿ ಬಳಗ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಪೂಜೆ ಸಲ್ಲಿಸುವ ಮೂಲಕ ಗೌರವದಿಂದ ಬರಮಾಡಿಕೊಂಡರು.
ಹುಲ್ಲೇಹಾಳ್ ನಾಗರಾಜ ಮತ್ತು ಸಂಗಡಿಗರು ಕಹಳೆ, ನಾಸಿಕ್ ಡೋಲು ಹಾಗೂ ಛತ್ರಿ ಚಾಮರಗಳೊಂದಿಗೆ ನಗರದ ಚಳ್ಳಕೆರೆ ಗೇಟಿನಿಂದ ವೈಶಾಲಿ ಸರ್ಕಲ್, ಜಿಲ್ಲಾಸ್ಪತ್ರೆಯ ಮುಂಭಾಗ, ಮದಕರಿ ವೃತ್ತ, ಒನಕೆ ಓಬವ್ವ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ವಿಜೃಂಭಣೆಯಿಂದ ಮೆರವಣಿಗೆ ಸಾಗಿಬಂದಿತು.
ಅಪಾರ ಜನಸ್ತೋಮದೊಂದಿಗೆ ಸಾಗಿ ಬಂದ ಕಿತ್ತೂರು ರಾಣಿ ಚನ್ನಮ್ಮಾಜಿಯ ವಿಜಯ ವೀರ ಜ್ಯೋತಿ ಯಾತ್ರೆಯನ್ನು ಜಿಲ್ಲಾಡಳಿತದ ವತಿಯಿಂದ ಅದ್ದೂರಿಯಾಗಿ ಬೀಳ್ಕೊಡಲಾಯಿತು. ವಿಜಯ ರಥಯಾತ್ರೆಯು ಸಂಜೆ 7.30ಕ್ಕೆ ದಾವಣಗೆರೆ ಜಿಲ್ಲೆಗೆ ಪ್ರಯಾಣಿಸಿತು.