ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಅಕ್ಟೋಬರ್.13 : ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಜಮೀನು ನಿವೇಶನಗಳನ್ನು ನೊಂದಣಿ ಮಾಡಿಸಿ ಸರ್ಕಾರದ ರಾಜಸ್ವಕ್ಕೆ ನಷ್ಟವುಂಟು ಮಾಡುತ್ತಿರುವ ಇಲ್ಲಿನ ಸಬ್‍ರಿಜಿಸ್ಟ್ರಾರ್ ಕಚೇರಿಯ ಉಪ ನೊಂದಣಾಧಿಕಾರಿ ಹಾಗೂ ಸಿಬ್ಬಂದಿಯವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಪಿ.ಲೀಲಾಧರ ಠಾಕೂರ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಂಚಿಗನಹಾಳ್ ಸಮೀಪ ವಾಣಿಜ್ಯೋಪಯೋಗಕ್ಕಾಗಿ ಪರಿವರ್ತನೆಯಾಗಿರುವ 28 ಕೋಟಿ 31 ಲಕ್ಷ 40 ಸಾವಿರ ರೂ. ಬೆಲೆ ಬಾಳುವ ಜಮೀನನ್ನು ಕೇವಲ 2.25 ಕೋಟಿಗೆ ನೋಂದಣಿ ಮಾಡಿಸಲಾಗಿದೆ.
ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಿ ನೊಂದಣಿಯಾಗಬೇಕು.
ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಉಪ ನೊಂದಣಾಧಿಕಾರಿ ಶ್ರೀಮತಿ ತುಳಸಿ ಲಕ್ಷ್ಮಿ ಹಾಗೂ ದಾಖಲಾತಿ ಪರಿಶೀಲಿಸುವ ಗುಮಾಸ್ತರು, ಸಿಬ್ಬಂದಿಯವರು ಸೇರಿಕೊಂಡು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮದಕರಿಪುರ ಗ್ರಾಮ ರಿ.ಸ.ನಂ. 16/31 ರಲ್ಲಿ 5.12 ಗುಂಟೆ ನಲವತ್ತು ಲಕ್ಷ ರೂ. ಬೆಲೆಬಾಳುವ ಜಮೀನು ಕೇವಲ ಒಂಬತ್ತು ಲಕ್ಷಕ್ಕೆ ನೊಂದಣಿಯಾಗಿದೆ. ಹಳೆರಂಗಾಪುರದಲ್ಲಿ ರಿ.ಸ.ನಂ. 7/34 ರಲ್ಲಿ ಏಳು ಲಕ್ಷ 32 ಸಾವಿರ 250 ರೂ. ಮೌಲ್ಯದ ಜಮೀನನ್ನು ಐದು ಲಕ್ಷ ರೂ.ಗಳಿಗೆ ನೊಂದಣಿ ಮಾಡಿಸಿ ಸರ್ಕಾರದ ಬೊಕ್ಕಸಕ್ಕೆ ಹಾನಿಯುಂಟು ಮಾಡಲಾಗಿದೆ.
ಇಂತಹ ಇನ್ನು ಅನೇಕ ಪ್ರಕರಣಗಳು ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಯಾವುದೇ ಆಸ್ತಿ ನೊಂದಣಿ ಮಾಡುವಾಗ ಮಾರಾಟ ಮಾಡುವವರ ಹೆಸರಲ್ಲಿ ಖಾತೆಯಿರಬೇಕೆಂಬ ನಿಯಮವಿದೆ. ಎಲ್ಲವನ್ನು ಉಲ್ಲಂಘಿಸಿ ಸ್ಟಾಂಪ್‍ವೆಂಡರ್, ಸಹಾಯಕರನ್ನು ಕಚೇರಿಯಿಂದ ಹೊರಗಿಟ್ಟು ಬ್ರೋಕರ್‍ಗಳನ್ನು ಸುತ್ತ ಇಟ್ಟುಕೊಂಡು ಹೆಚ್ಚು ಬೆಲೆ ಬಾಳುವ ಜಮೀನು ನಿವೇಶನಗಳನ್ನು ಕಡಿಮೆ ಬೆಲೆಗೆ ನೊಂದಾಯಿಸಿ ಹಣ ಲಪಾಟಿಸುವ ಹಗರಣ ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪಿ.ಲೀಲಾಧರ ಠಾಕೂರ್ ಒತ್ತಾಯಿಸಿದರು.
ನಗರಸಭೆ ಮಾಜಿ ಸದಸ್ಯ ಬಿ.ಎಲ್.ರವಿಶಂಕರ್‍ಬಾಬು, ಮಲ್ಲಿಕಾರ್ಜುನ್, ರವಿಆಲಘಟ್ಟ, ಚಿತ್ರಶೇಖರಪ್ಪ, ರೇವಣ್ಣ ಮದಕರಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.