ಬೆಂಗಳೂರು: ಬಿಜೆಪಿ ಸರ್ಕಾರವಿದ್ದಾಗ 40% ಕಮೀಷನ್ ಆರೋಪ ಮಾಡಿದ್ದ ಕೆಂಪಣ್ಣ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದಾರೆ. ಇಂದು ಸುದ್ದಿಗೋಷ್ಟಿ ನಡೆಸಿ, ಕಾಂಗ್ರೆಸ್ ಸರ್ಕಾರ ಕೂಡ ಬಾಕಿ ಇರುವ ಬಿಲ್ ಪಾವತಿ ಮಾಡಿಲ್ಲ ಅಂತ ಹೇಳಿ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಐದು ತಿಂಗಳಿಂದ ಸರ್ಕಾರ ಬಾಕಿ ಇರುವ ಬಿಲ್ ಅನ್ನು ಪಾವತಿ ಮಾಡಿಲ್ಲ. ಮೊನ್ನೆಯಷ್ಟೇ ಒಂದು ಸಾವಿರ ಕೋಟಿ ಇರುವ ಕಾಮಗಾರಿಗಳ ಬಿಲ್ ಕ್ಲಿಯರ್ ಆಗಿದೆ. ಬಿಬಿಎಂಪಿಯಿಂದ ಇನ್ನು ನಾಲ್ಕು ಸಾವಿರ ಕೋಟಿ ರೂಪಾಯಿ ಬಾಕಿ ಇದೆ. ಪ್ರತಿ ಬಾರಿಯೂ ಸರ್ಕಾರಗಳು ಹಿಂದಿನ ಸರ್ಕಾರಗಳ ಮೇಲೆ ಬೊಟ್ಟು ಮಾಡಿ ತೋರಿಸುತ್ತವೆ. ಹುಬ್ಬಳ್ಳಿಯಲ್ಲಿ ಈಗಾಗಲೇ ಗುತ್ತಿಗೆದಾರನೊಬ್ಬ ವಿಷ ತೆಗೆದುಕೊಂಡಿದ್ದಾನೆ. ನಾವೂ ಕಷ್ಟದಲ್ಲಿದ್ದೇವೆ ಎಂದಿದ್ದಾರೆ.
ಇನ್ನು ರೈತರಾದರೂ ಪರವಾಗಿಲ್ಲ. ಆದರೆ ನಮ್ಮ ಪರಿಸ್ಥಿತಿ ಅಯೋಮಯವಾಗಿದೆ. ಕೂಡಲೇ ಬಾಕಿ ಇರುವ ಬಿಲ್ ಅನ್ನು ಪಾವತಿಸಿ. ಸೀನಿಯಾರಿಟಿ ಆಧಾರದ ಮೇಲೆ ಪಾವತಿಮಾಡಬೇಕು. ಗುತ್ತಿಗೆದಾರರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಈಗ ಹಣ ಬಿಡುಗಡೆಯಾಗದೆ ಹೋದಲ್ಲಿ ಸಾಕಷ್ಟು ಸಾವು ನೋವಾಗುತ್ತದೆ. ಹೊರ ರಾಜ್ಯದ ಗುತ್ತಿಗೆದಾರರಿಗೆ ಈಗ ಮಣೆಹಾಕಲಾಗುತ್ತಿದೆ. ರೂಲ್ಸ್ ಪ್ರಕಾರ ಅದು ಕಾನೂನು ಬಾಹಿರ ಅಲ್ಲವಾ. ಹಿಂದಿನ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಕೇಳಿ ಬಂದಿತ್ತು. ಆದರೆ ಈಗ ಕಮಿಷನ್ ಬಗ್ಗೆ ಯಾವುದೇ ದೂರು ಬಂದಿಲ್ಲ. ನಾಲ್ಕು ಬಾರಿ ಸಿಎಂ ಅವರನ್ನು ಭೇಟಿ ಮಾಡಿದ್ದೇವೆ. ನಮ್ಮ ಬಳಿ ಈಗಲೇ ಹಣವಿಲ್ಲ. ಜಿಎಸ್ಟಿ ಎಲ್ಲಾ ಎಲ್ಲಿಂದ ತಂದು ಕಟ್ಟೋಣಾ ಎಂದು ಕೆಂಪಣ್ಣ ಆಕ್ರೋಶ ಹೊರ ಹಾಕಿದ್ದಾರೆ.