ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.12 ಲೋಡ್‍ಶೆಡ್ಡಿಂಗ್‍ನಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆಯೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ತಿಪ್ಪಜ್ಜಿ ಸರ್ಕಲ್‍ನಲ್ಲಿರುವ ಬೆಸ್ಕಾಂ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಮಧ್ಯಕರ್ನಾಟಕದ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಸಕಾಲಕ್ಕೆ ಮಳೆಯಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಉಳಿದಿರುವ ಅಷ್ಟಿಷ್ಟು ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿರುವ ರೈತರ ಪಂಪ್‍ಸೆಟ್‍ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಕೊಡಬೇಕೆಂಬ ನಿಯಮಿವಿದ್ದರು ಕೇವಲ ಎರಡು ಮೂರು ಗಂಟೆಗಳೂ ವಿದ್ಯುತ್ ಇಲ್ಲದಂತಾಗಿದೆ. ಇದರಿಂದ ತೋಟಗಾರಿಕಾ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು, ಕೃಷಿಗೆ ಬಂಡವಾಳ ಹಾಕಿರುವ ರೈತ ಕೈಸುಟ್ಟುಕೊಂಡು ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ. ರೈತರಿಗೆ ಪೂರೈಸಬೇಕಾಗಿದ್ದ ವಿದ್ಯುತ್‍ನ್ನು ಸರ್ಕಾರ ಕಾರ್ಖಾನೆಗಳಿಗೆ ಸರಬರಾಜು ಮಾಡುತ್ತಿದೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕಗಳನ್ನು 24 ಗಂಟೆಯೊಳಗೆ ಬದಲಾಯಿಸಿಕೊಡಬೇಕೆಂಬ ನಿಯಮವನ್ನು ಉಲ್ಲಂಘಿಸುತ್ತಿರುವ ಬೆಸ್ಕಾಂ ಇಂಜಿನಿಯರ್‍ಗಳು ನಾಲ್ಕೈದು ದಿನಗಳಾದರೂ ಕೊಡದೆ ಸತಾಯಿಸುತ್ತಾ ಒಂದಲ್ಲ ಒಂದು ರೀತಿಯಲ್ಲಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಒಂದೆ ಕಡೆ ಮೂರು ವರ್ಷಕ್ಕಿಂತ ಮೇಲ್ಪಟ್ಟು ಠಿಕಾಣಿ ಹೂಡಿರುವ ಸಿಬ್ಬಂದಿಗಳನ್ನು ಬೇರೆಡೆ ವರ್ಗಾಯಿಸಬೇಕು. ಅಕ್ರಮ-ಸಕ್ರಮದಡಿ ಹಣ ಸಂದಾಯ ಮಾಡಿರುವ ರೈತರಿಗೆ ತಕ್ಷಣ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ತೋಟದ ಮನೆಗಳಲ್ಲಿ ಅನೇಕ ರೈತರು ವಾಸಿಸುತ್ತಿದ್ದು, ಓಪನ್ ಡೆಲ್ಟಾ ಆರಂಭಿಸಿದಾಗಿನಿಂದಲೂ ಕತ್ತಲೆಯಲ್ಲಿ ವಾಸ ಮಾಡುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆಯಲ್ಲದೆ ರಾತ್ರಿ ವೇಳೆ ವಿಷಜಂತುಗಳಿಂದ ಕಚ್ಚಿಸಿಕೊಂಡು ಸಾವನ್ನಪ್ಪುವ ಸಂದರ್ಭಗಳಿವೆ. ಇಷ್ಟೆಲ್ಲಾ ನೂನ್ಯತಗಳನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಸ್ಕಾಂ ಎದುರು ಚಳುವಳಿ ನಡೆಸುವುದಾಗಿ ರೈತರು ಎಚ್ಚರಿಸಿದರು.
ಬೆಸ್ಕಾಂನ ಎ.ಇ.ಇ. ರೈತರಿಂದ ಮನವಿ ಸ್ವೀಕರಿಸಿ ಹಗಲು ಮೂರು ಗಂಟೆ, ರಾತ್ರಿ ಎರಡು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಸರ್ಕಾರ ನಿನ್ನೆಯಷ್ಟೆ ಆದೇಶಿಸಿದೆ ಹಾಗಾಗಿ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುವುದೆಂದು ಭರವಸೆ ಕೊಟ್ಟಾಗ ದಿನಕ್ಕೆ ಏಳು ಗಂಟೆಗಳ ವಿದ್ಯುತ್ ಪೂರೈಕೆಯಾದಾಗ ಮಾತ್ರ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ, ರೈತ ಮುಖಂಡರುಗಳಾದ ಜಿ.ಟಿ.ವೆಂಕಟೇಶರೆಡ್ಡಿ, ಲಕ್ಷ್ಮಿಕಾಂತ್, ಎನ್.ಹನುಮಂತರೆಡ್ಡಿ, ಮಾರುತಿ, ಡಿ.ಟಿ.ವಿರುಪಾಕ್ಷಪ್ಪ, ವಿ.ಆರ್.ಸಂತೋಷ್‍ರೆಡ್ಡಿ, ವಿ.ಮಂಜುನಾಥರೆಡ್ಡಿ, ಹನುಮಂತ, ವೀರೇಶ, ಗೋವಿಂದರೆಡ್ಡಿ, ಜಯಣ್ಣ, ರಮೇಶ, ರುದ್ರಮುನಿ, ಬಸವರಾಜ್, ಪರಮೇಶ್ವರಪ್ಪ, ಎಂ.ಕೆ.ಶಿವಣ್ಣ, ಬಿ.ಎಸ್.ರುದ್ರಮುನಿ, ಜಿ.ಆರ್.ನಾಗರಾಜ, ಓಬಣ್ಣ, ಪ್ರದೀಪ, ಹರೀಶ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.