ಬೆಂಗಳೂರು: ಇಸ್ರೇಲ್ – ಪ್ಯಾಲೆಸ್ತಿನ್ ಯುದ್ಧದಲ್ಲಿ ಸಾವು ನೋವುಗಳು ಹೆಚ್ಚಾಗುತ್ತಿವೆ. ಕರುಣೆ ಇಲ್ಲದಂತೆ ಮಕ್ಕಳನ್ನು ಬಿಡದೆ ಉಗ್ರರು ಕೊಲ್ಲುತ್ತಿದ್ದಾರೆ. ಹಮಾಸ್ ಉಗ್ರರು ಕ್ರೂರಿಗಳಂತೆ ವರ್ತಿಸುತ್ತಿದ್ದಾರೆ. ಅಲ್ಲಿನ ವಿದೇಶಿಗರು ಜೀವ ಕೈಯಲ್ಲಿಡಿದುಕೊಂಡು ಬದುಕುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನ ಟಿವಿಯಲ್ಲಿ ನೋಡಿಯೇ ಜನ ಭಯಭೀತರಾಗಿದ್ದಾರೆ. ಅದರಲ್ಲೂ ಭಾರತದವರು ಕೂಡ ಸಿಲುಕಿದ್ದಾರೆ.
ಕರ್ನಾಟಕದ ಬಾಗಲಕೋಟೆಯ ಮಹಿಳೆಯೊಬ್ಬರು ಇಸ್ರೆಲ್ ನಲ್ಲಿ ಸಿಲುಕಿದ್ದಾರೆ. ಪೂಜಾ ಎಂಬುವವರು ಇಸ್ರೇಲ್ ನಲ್ಲಿ ಸಿಲುಕಿದ್ದು, ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಪೂಜಾ ಕಳೆದ ಒಂದೂವರೆ ವರ್ಷದ ಹಿಂದೆ ಇಸ್ರೇಲ್ ಗೆ ಹೋಗಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ ಅಲ್ಲಿ ಯುದ್ಧ ಶುರುವಾಗಿದ್ದು, ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಪೂಜಾ ಮನೆಯವರನ್ನು ಸಚಿವ ಆರ್ ಬಿ ತಿಮ್ಮಾಪುರ ಭೇಟಿ ಮಾಡಿದ್ದಾರೆ. ಸಮಾಧಾನ ಹೇಳಿದ್ದು, ಅಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರಿಗೂ ಕರೆ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು, ಪೂಜಾ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ. ಪೂಜಾ ಅವರೊಂದಿಗೆ ನಾನು ಮಾತನಾಡಿದ್ದೇನೆ. ಇಸ್ರೇಲ್ ನಲ್ಲಿ ಅವರು ಸುರಕ್ಷಿತವಾಗಿದ್ದಾರೆ. ನೀವೂ ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದಿದ್ದಾರೆ.
ಇಸ್ರೇಲ್ ನಲ್ಲಿ ಪ್ರತಿಷ್ಠಿತ ಟಿಸಿಎಚ್ ಸಂಸ್ಥೆಯಲ್ಲಿ ಪೂಜಾ ಕೆಲಸ ಮಾಡುತ್ತಿದ್ದಾರೆ. ಇಸ್ರೇಲ್ ನಲ್ಲಿ ನಡೆಯುತ್ತಿರುವ ಯುದ್ಧ ಕಂಡು ಬಾಗಲಕೋಟೆಯ ಕುಟುಂಬಸ್ಥರಿಗೆ ಮನಸ್ಸಿಗೆ ನೆಮ್ಮದಿಯೇ ಇಲ್ಲ. ಮಗಳಿಗೆ ಅಲ್ಲಿ ಏನಾಯ್ತೋ..? ಹೇಗಿದ್ದಾಳೋ..? ಎಂಬ ಚಿಂತೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಹೇಳಿರುವ ಮಾತುಗಳುಗೆ ಕೊಂಚ ಧೈರ್ಯ ತೆಗೆದುಕೊಂಡಿದ್ದಾರೆ. ಮಗಳು ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರತಿ ದಿನ, ಪ್ರತಿ ಕ್ಷಣ ಪೂಜೆ ಸಲ್ಲಿಸುತ್ತಿದ್ದಾರೆ.