ಸುದ್ದಿಒನ್ : ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
ಅಪರೂಪದ ಸಾಧನೆ ಮಾಡಿ ಇತಿಹಾಸ ಬರೆದಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ.
ಏಕದಿನ ವಿಶ್ವಕಪ್-2023 ರ ಭಾಗವಾಗಿ ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಈ ಅಪರೂಪದ ದಾಖಲೆ ಬರೆದಿದ್ದಾರೆ. ಭಾರತದ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ನವೀನ್ ಉಲ್ ಅವರ ಬೌಲಿಂಗ್‌ನ ಐದನೇ ಎಸೆತವನ್ನು ರೋಹಿತ್ ಸಿಕ್ಸರ್ ಹೊಡೆಯುವ ಮೂಲಕ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡರು.
ರೋಹಿತ್ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 554 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದುವರೆಗೆ ಈ ದಾಖಲೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ (553) ಹೆಸರಿನಲ್ಲಿತ್ತು. ಇಂದಿನ ಪಂದ್ಯದಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರು ಗೇಲ್ ಅವರ ದಾಖಲೆಯನ್ನು ಮುರಿದರು.
ರೋಹಿತ್ ಶರ್ಮಾ ಅವರು ಇಂದಿನ ಪಂದ್ಯದಲ್ಲಿ 81 ಎಸೆತಗಳಲ್ಲಿ 131 ರನ್ ಗಳಿಸಿ ರಷಿದ್ ಖಾನ್ ಅವರ ಬೌಲಿಂಗ್‌ನಲ್ಲಿ ಬೋಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಸದ್ಯ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರು ಆಟವಾಡುತ್ತಿದ್ದಾರೆ.
30 ಓವರ್‌ಗಳ ಆಟ ಮುಗಿದಿದ್ದು, ಎರಡು ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದೆ. ಆಫ್ಘಾನಿಸ್ತಾನ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದ್ದು, ಭಾರತಕ್ಕೆ 273 ರನ್‌ಗಳ ಗುರಿ ನೀಡಿದೆ.