ನವದೆಹಲಿ: ರಾಜ್ಯದಲ್ಲೆಡೆ ಜಾತಿಗಣತಿ ವರದಿ ಸದ್ದು ಮಾಡುತ್ತಿರುವಾಗಲೇ ಇಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯದಲ್ಲಿ ಜಾತಿಗಣತಿ ವರದಿ ಸ್ವೀಕರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಜಾತಿ ಗಣತಿ ವರದಿ ಮೇಲೆ ನಾವೂ ಜಾತಿ ವಿಭಜನೆ ಮಾಡುತ್ತಿಲ್ಲ. ಜನರ ಆರ್ಥಿಕತೆಯ ಬಗ್ಗೆಯೂ ನಾವೂ ಸರ್ವೇ ನಡೆಸಲಿದ್ದೇವೆ. ನಾವೂ ತಪ್ಪು ಮಾಡಿದ್ದೇವೆ. ಈ ಹಿಂದೆಯೂ ನಾವೂ ಜಾತಿ ಗಣತಿ ಮಾಡಿಲ್ಲ. ಈಗಾಗಲೇ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಬಳಿ ಮಾತನಾಡಿದ್ದೇನೆ ಎಂದಿದ್ದಾರೆ. ಕರ್ನಾಟಕ, ಹಿಮಾಚಲ, ರಾಜಸ್ಥಾನ ಸೇರಿದಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ.
ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಮ್ಮ ಹಿಂದಿನ ಸರ್ಕಾರವೇ ಜಾತಿ ಸಮೀಕ್ಷೆ ಮಾಡಿತ್ತು. ನಮ್ಮದೇ ಸರ್ಕಾರವಿತ್ತು ಜಾತಿ ಸಮೀಕ್ಷೆ, ಆರ್ಥಿಕ ಸಮೀಕ್ಷೆಯನ್ನು ಮಾಡಲು ಆಸಕ್ತಿ ತೋರಿಸಿತ್ತು. ಆದರೆ ನಮ್ಮ ಅವಧಿ ಮುಗಿಯುವುದರೊಳಗೆ ಸಮೀಕ್ಷೆಯ ವರದಿ ಸಿದ್ದವಾಗಿರಲಿಲ್ಲ. ಬಳಿಕ ಮೈತ್ರಿ ಸರ್ಕಾರ ರಚನೆಯಾಗಿತ್ತು. ಸಿಎಂ ಆದ ಹೆಚ್ ಡಿ ಕುಮಾರಸ್ವಾಮಿ ಅವರು ವರದಿಯನ್ನು ಪಡೆಯಲಿಲ್ಲ. ಈಗ ವರದಿ ಸಲ್ಲಿಸಲು ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರಿಗೆ ಸೂಚಿಸಿದ್ದೇವೆ ಎಂದಿದ್ದಾರೆ.