ಬಿಡದಿ: ಬಿಹಾರದ ಜಾತಿಗಣತಿಯ ಬೆನ್ನಲ್ಲೇ ಕರ್ನಾಟಕದ ಜಾತಿಗಣತಿಯ ಬೇಡಿಕೆಯೂ ಹೆಚ್ಚಾಗಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಜಾತಿಗಣತಿ ವಿಚಾರದಲ್ಲಿ ಕುಮಾರಸ್ವಾಮಿ ಅವರೇ ಸ್ವೀಕರಿಸಲಿಲ್ಲ ಎಂದಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದ ಮಾತಿಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಡದಿಯ ತೋಟದ ಮನೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂತರಾಜು ಅವರಿಂದ ವರದಿ ಕೊಡಿಸಿದ್ದೇವೆ, ಆದರೆ ಕುಮಾರಸ್ವಾಮಿ ಅವರು ಸ್ವೀಕರಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ ಸದಸ್ಯ, ಕಾರ್ಯದರ್ಶಿ ಸಹಿ ಇಲ್ಲದೆ ಆ ವರದಿ ಸ್ವೀಕಾರ ಮಾಡುವುದು ಹೇಗೆ..? ಆ ಅರಿವು ಸಿಎಂ ಆದವರಿಗೆ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ನವರು ಒಂದು ಕಡೆ ಜಾತ್ಯಾತೀತತೆ ಎನ್ನುತ್ತಾರೆ. ಇನ್ನಿಂದು ಕಡೆ ಜಾತಿಗಣತಿ ವರದಿ ಇಟ್ಟುಕೊಂಡು ಜಾತಿ ಜಾತಿಗಳ ನಡುವೆ ಬೀಜ ಬಿತ್ತಲು ಹೊರಟಿದ್ದಾರೆ. ಜಾತಿಗಣತಿ ವರದಿ ಇಟ್ಟುಕೊಂಡು ರಾಜ್ಯಸರ್ಕಾರವೂ ರಾಜಕೀಯ ಮಾಡುತ್ತಿದೆ. ಮಾತೆತ್ತಿದರೆ ನನ್ನ ಕಡೆ ಬೆರಳು ಮಾಡಿ ತೋರಿಸುವ ಅವರು, ಈ ಸಂದರ್ಭದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಒಮ್ಮೆಯಾದರೂ ಕಾಂತರಾಜು ವರದಿ ಬಗ್ಗೆ ಚರ್ಚೆ ಮಾಡಿದರಾ..? ಇಲ್ಲ, ಪ್ರತಿ ಸಭೆಯಲ್ಲೂ ಟವೆಲ್ ಕೊಡವಿ ಎದ್ದು ಹೋಗುತ್ತಿದ್ದರು ಎಂದಿದ್ದಾರೆ.