ಜೆಡಿಎಸ್ ವಚನ ಭ್ರಷ್ಟ ಎಂದು ನಾವೇ ಹೇಳಿ ಈಗ ಮೈತ್ರಿ ಮಾಡಿಕೊಂಡರೆ ಹೇಗೆ ? ಚಿತ್ರದುರ್ಗದಲ್ಲಿ ರೇಣುಕಾಚಾರ್ಯ ಹೇಳಿಕೆ…!

1 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.09 : ಮಾಜಿ ಸಚಿವ ರೇಣುಕಾಚಾರ್ಯ ಇತ್ತಿಚೆಗೆ ಸ್ವಪಕ್ಷದವರ ಮೇಲೆಯೆ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಮೈತ್ರಿ ವಿಚಾರಕ್ಕೂ ರೇಣುಕಾಚಾರ್ಯ ಬೇಸರ ಹೊರ ಹಾಕಿದ್ದಾರೆ. ಮೈತ್ರಿಯಿಂದಾಗಿ ಎರಡು ಪಕ್ಷದಲ್ಲೂ ಸಂಘರ್ಷ ಏರ್ಪಟ್ಟಿದೆ ಎಂದಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ರಾಷ್ಟ್ರನಾಯಕರ ಮಟ್ಟದ ಚರ್ಚೆಯಾಗಿದೆ. ಮೈತ್ರಿ ಎಂದರೆ ಕಾರ್ಯಕರ್ತರ ನಡುವೆ ಸಾಮರಸ್ಯ ಇರಬೇಕು. ಆದರೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಆಗುತ್ತಿದೆ. ನಾನು ಬಿಜೆಪಿ, ಜೆಡಿಎಸ್ ಮೈತ್ರಿ ವಿರೋಧ ಮಾಡಲ್ಲ. ಬಿಜೆಪಿ ಕಾರ್ಯಕರ್ತರು ಜೆಡಿಎಸ್, ಕಾಂಗ್ರೆಸ್ ವಿರೋಧಿಸಿಕೊಂಡು ಬಂದಿದ್ದಾರೆ.

ಈ ಹಿಂದೆ ಜೆಡಿಎಸ್ ಗೆ ವಚನ ಭ್ರಷ್ಟರು ಎಂದು ನಾವೇ ಹೇಳಿದ್ದೆವು. ಅಂಥವರ ಜತೆ ಯಾವ ರೀತಿ ಮೈತ್ರಿ ಎಂದು ಜನ ಕೇಳುತ್ತಿದ್ದಾರೆ. ರಾಜ್ಯ ನಾಯಕರನ್ನು ಹೊರಗಿಟ್ಟು ಮೈತ್ರಿ ಅಪೂರ್ಣವಾಗಿದೆ. ರಾಜ್ಯ ನಾಯಕರು ಮೊದಲು‌ ಬಿಎಸ್ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮ್ಮ ರಾಜ್ಯ ನಾಯಕರು ಬಿಎಸ್ ಯಡಿಯೂರಪ್ಪ ಅವರನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿಟ್ಟು ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿ ಕಾಂಗ್ರೆಸ್ ಮೈತ್ರಿ ಎಷ್ಟರಮಟ್ಟಿಗೆ ಯಶಸ್ವಿ ಆಗುತ್ತದೆ ಎಂದು ನೋಡಬೇಕಿದೆ.

ಮೈತ್ರಿ ಎರಡನೇ ಭಾಗ, ಈವರೆಗೆ ರಾಜ್ಯದ್ಯಕ್ಷ, ವಿಪಕ್ಷ ನಾಯಕರ ಆಯ್ಕೆಯೇ ಆಗಿಲ್ಲ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ನೋವಿನಿಂದ ಮಾತಾಡುತ್ತಿದ್ದಾರೆ. ಬಿಜೆಪಿ ಒಂದು ವಿಭಿನ್ನ ಪಕ್ಷವೆಂದು ಹೇಳುತ್ತೇವೆ. ಕಾರ್ಯಕರ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬೇರೆಯವರಿಗೆ ಟೀಕೆ ಮಾಡಲು ನಮಗೆ ಯಾವ ನೈತಿಕತೆ ಇದೆ. ಮೊದಲು ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರ ಆಯ್ಕೆ ಮಾಡಲಿ. ಲೋಕಸಭೆ ಚುನಾವಣೆ ಪೂರ್ವದಲ್ಲೇ ಆಯ್ಕೆ ಆಗಬೇಕು ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಈ ಬಾರಿ ನಾನು ದಾವಣಗೆರೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗುವ ಅಪೇಕ್ಷೆ ಪಕ್ಷದಲ್ಲಿ ತಿಳಿಸಿದ್ದೇನೆ. ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ನೋಡೋಣ. ನಾನು ಸಂಘಟನೆಯಿಂದ ಬಂದವನು, ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ. ನಮ್ಮದೇ ಪಕ್ಷದವರು ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *