ಸುದ್ದಿಒನ್ : ಭೂಕಂಪದಿಂದ ಅಫ್ಘಾನಿಸ್ತಾನ ತತ್ತರಿಸಿದೆ. ಇದು ಎರಡು ದಶಕಗಳಲ್ಲೇ ಅತಿ ದೊಡ್ಡ ಭೂಕಂಪವಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ 2 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು ಸಂಪೂರ್ಣ ನೆಲಸಮವಾಗಿವೆ.ಕುಸಿದ ಕಟ್ಟಡಗಳ ಅವಶೇಷಗಳಡಿ ನೂರಾರು ಮಂದಿ ಸಿಲುಕಿಕೊಂಡಿದ್ದಾರೆ.
ಅವರನ್ನು ರಕ್ಷಿಸಲು ಅಫ್ಘಾನಿಸ್ತಾನದ ವಿಪತ್ತು ನಿರ್ವಹಣಾ ಪಡೆಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿವೆ. ಮೃತರು ಮತ್ತು ಗಾಯಗೊಂಡವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯ ಸಮೀಪದಲ್ಲಿರುವ ಹೆರಾತ್ ಪ್ರಾಂತ್ಯದಲ್ಲಿ ಶನಿವಾರ ಮಧ್ಯಾಹ್ನ ಕನಿಷ್ಠ ಏಳು ಬಾರಿ ಭೂಮಿ ಕಂಪಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ಅದು ಹೇಳಿದೆ. ಭೂಕಂಪದಿಂದ ಆರು ಗ್ರಾಮಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
400ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, ಸಾವಿರಾರು ಮನೆಗಳಿಗೆ ಹಾನಿಯಾಗಿದೆ. ತಾಲಿಬಾನ್ ಸರ್ಕಾರಿ ಅಧಿಕಾರಿಯೊಬ್ಬರು ಭೂಕಂಪದಿಂದಾಗಿ ಸಂಪರ್ಕ ವ್ಯವಸ್ಥೆಗೆ ತೀವ್ರ ಅಡಚಣೆ ಉಂಟಾಯಿತು ಎಂದು ತಿಳಿಸಿದ್ದಾರೆ.
ಹೆರಾತ್ ಪ್ರಾಂತ್ಯದಲ್ಲಿ 19 ಲಕ್ಷ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ. ಇದು ಹಿಂದೂ ಖುಷ್ ಪರ್ವತ ಶ್ರೇಣಿಯಲ್ಲಿ ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನ ಸಮೀಪದಲ್ಲಿದೆ. ಕಳೆದ ವರ್ಷದ ಜೂನ್‌ನಲ್ಲಿ, ಅಫ್ಘಾನಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ 5.9 ರ ತೀವ್ರತೆಯ ಭೀಕರ ಭೂಕಂಪವು ಸಂಭವಿಸಿ, ಸುಮಾರು 1000 ಜನರು ಸಾವನ್ನಪ್ಪಿದ್ದರು. 10000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ 6.5 ತೀವ್ರತೆಯ ಭೂಕಂಪದಿಂದಾಗಿ 13 ಜನರು ಸಾವನ್ನಪ್ಪಿದ್ದರು.
ಶನಿವಾರ 12 ಗಂಟೆ 19 ನಿಮಿಷಗೆ 5.6 ತೀವ್ರತೆಯ ಮೊದಲ ಭೂಕಂಪ ವರದಿಯಾಗಿದೆ. ಅದರ ನಂತರ, ಅರ್ಧ ಗಂಟೆಯೊಳಗೆ ಮತ್ತೆ ಎರಡು ಭೂಕಂಪಗಳು ಸಂಭವಿಸಿದವು. ಒಮ್ಮೆ 12 ಗಂಟೆ 11 ನಿಮಿಷಕ್ಕೆ 6.1 ತೀವ್ರತೆ.. ಆ ನಂತರ 12 ಗಂಟೆ 42 ನಿಮಿಷಕ್ಕೆ 6.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಈ ಭೂಕಂಪದ ತೀವ್ರತೆಗೆ ಸಾವಿರಾರು ಮನೆಗಳು ಕುಸಿದಿದ್ದು, ಒಂದೇ ಕುಟುಂಬದ 11 ಸದಸ್ಯರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.