ಚಿತ್ರದುರ್ಗ,(ಅಕ್ಟೋಬರ್.25) : ಕೋವಿಡ್-19 ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಬಹಳಷ್ಟು ಶ್ರಮ ವಹಿಸಿ ಕೆಲಸ ನಿರ್ವಹಿಸಿದ್ದಾರೆ. ಅವರ ಶ್ರಮದಿಂದ ದೇಶದಲ್ಲಿ ಇಂದು 100 ಕೋಟಿ ಲಸಿಕಾಕರಣ ನೀಡುವುದಕ್ಕೆ ಸಾಧ್ಯವಾಗಿದೆ. ಅವರ ಈ ಸೇವೆ ಶ್ಲಾಘನೀಯ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ 100 ಕೋಟಿಗೂ ಅಧಿಕ ಲಸಿಕೆ-ಹೊಸ ದಾಖಲೆ ಬರೆದ ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಚಿತ್ರದುರ್ಗ ತಾಲ್ಲೂಕು ಮಟ್ಟದ “ಸಂಭ್ರಮಾಚರಣೆ ಸಮಾರಂಭ” ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಕೋವಿಡ್-19 ಸಂದರ್ಭದಲ್ಲಿ ತಮ್ಮ ಮನೆಗಳಿಗೆ ತೆರಳದೇ ಕಾರ್ಯನಿರ್ವಹಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರದ ಸೇವೆ ಮಾಡುವಲ್ಲಿ ತಮ್ಮ ಜೀವದ ಅಂಗು ತೊರೆದು ಕೆಲಸ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಸೇವೆಯನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಇಂದು ಕೋವಿಡ್ ವಾರಿಯರ್ಸ್ ಅವರಿಗೆ ಸನ್ಮಾನ ಮಾಡಲಾಗುತ್ತಿದೆ. ಕೋವಿಡ್‍ನಿಂದಾಗಿ ಅನೇಕ ಮಕ್ಕಳು ತಮ್ಮ ತಂದೆ-ತಾಯಿಯರನ್ನು ಕಳೆದುಕೊಂಡಿದ್ದಾರೆ ಅಂತಹ ಮಕ್ಕಳಿಗೆ ಸರ್ಕಾರದ ವತಿಯಿಂದ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರಗೆ ಶಿಕ್ಷಣ ನೀಡಲು ಮುಂದಾಗಿದೆ ಎಂದರು.
ಪ್ರಪಂಚದಲ್ಲಿ ಕೋವಿಡ್ ಲಸಿಕೆ ಕಂಡುಹಿಡಿದ ಕೀರ್ತಿ ಭಾರತದ ವಿಜ್ಞಾನಿಗಳಿಗೆ ಸಲ್ಲುತ್ತದೆ ಹಾಗೂ ವಿಶ್ವದಲ್ಲೇ ಉಚಿತವಾಗಿ ಕೋವಿಡ್ ಲಸಿಕೆ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದರು.
ಸಾರ್ವಜನಿಕರು ಕೋವಿಡ್ ಲಸಿಕೆ ಪಡೆದಿದ್ದೇವೆ ನಮ್ಮಗೆ ಕೊರೋನಾ ಬರುವುದಿಲ್ಲ ಎಂದು ಉದಾಸೀನ ಮಾಡದೇ ಎಲ್ಲರೂ ಸರ್ಕಾರದ ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಮರೆಯಬಾರದು ಹಾಗೂ ಈಗಾಗಲೇ ಕೋವಿಡ್ ಮೊದಲ ಲಸಿಕೆ ಪಡೆದವರೂ ತಪ್ಪದೇ ಎರಡನೇ ಲಸಿಕೆ ಪಡೆಯಿರಿ ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ರಂಗನಾಥ್ ಮಾತನಾಡಿ, ಕೋವಿಡ್-19 ಮಹಾಮಾರಿ ಇಡೀ ಪ್ರಪಂಚಕ್ಕೆ ತುತ್ತಾದ ಸಂದರ್ಭದಲ್ಲಿ ಕೋವಿಡ್ ಲಸಿಕೆಯನ್ನು ಬಹಳ ಪರಿಣಾಮಕಾರಿಯಾಗಿ ಕೊಡಬೇಕು ಎಂದು ಸರ್ಕಾರ ಪಣತೊಟ್ಟು ತ್ವರಿತವಾಗಿ ಇಡೀ ದೇಶದಲ್ಲಿ ಲಸಿಕೆ ನೀಡಿ ಬೃಹತ್ ಸಾಧನೆ ಮಾಡಿದೆ. ಇದಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಲಸಿಕಾಕರಣದಲ್ಲಿ ಚಿತ್ರದುರ್ಗ ತಾಲ್ಲೂಕು ಗಮನಿಸಿದಾಗ ಗ್ರಾಮೀಣ ಪ್ರದೇಶದಲ್ಲಿ ಶೇ.70ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ.97 ರಷ್ಟು ಪ್ರಗತಿ ಸಾಧಿಸಲಾಗಿದೆ. ಲಸಿಕೆ ಕಾರ್ಯದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ಆಶಾ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಲಸಿಕೆ ವಿತರಿಸಲು 12 ಲಕ್ಷ ಗುರಿ ನಿಗಧಿಪಡಿಸಲಾಗಿತ್ತು. ಅದರಲ್ಲಿ 9ಲಕ್ಷದ 80 ಸಾವಿರ ಜನರಿಗೆ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್‍ಗಳಾದ ಚಿತ್ರದುರ್ಗ ತಾಲ್ಲೂಕಿನ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿ ದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಹೆಚ್.ಜೆ. ಬಸವರಾಜ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಪಿ.ಸಿ. ಕುಮಾರಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ. ವಿ. ಗಿರೀಶ್, ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಎಸ್. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ. ಬಿ. ಮೂಗಪ್ಪ, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.