ಹುಬ್ಬಳ್ಳಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬರ ಆವರಿಸಿದೆ. ಬರ ಪರಿಹಾರವನ್ನು ಸಮರ್ಥವಾಗಿ ಪರಿಹರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇದು ಬರೀ ಬಾಯಿ ಮಾತಿನಲ್ಲೇ ನಡೆಯುತ್ತಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬರೀ ಹೇಳಿಕೆಯಲ್ಲಿಯೇ ಈ ಸರ್ಕಾರ ಆಡಳಿತ ನಡೆಸುತ್ತಾ ಇದೆ. ರಾಜ್ಯದಲ್ಲಿ ಬರಗಾಲ ಆವರಿಸಿ ಮೂರಿ ತಿಂಗಳಾಗಿದೆ, ಬೆಳೆ ನಾಶವಾಗಿದೆ. ಇದರಿಂದ ರೈತರು ಕಂಗಲಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ಸರ್ಕಾರ ಜೀವಂತ ಇದೆಯೋ, ಇಲ್ಲವೋ ಎಂಬುದು ಇಂತಹ ಸಂದರ್ಭದಲ್ಲಿಯೇ ಗೊತ್ತಾಗೋದು. ಬರೀ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಿಕೊಂಡು ಬರುತ್ತಿದೆ. ಕುಡಿಯುವ ನೀರಿನ ಸಮಸ್ಯೆಗೂ ಇದುವರೆಗೂ ಪರಿಹಾರ ಹುಡುಕಿಲ್ಲ. ನಿಮ್ಮ ಬಳಿ ಈಗಾಗಲೇ ವಿಕೋಪ ನಿಧಿ ಇದೆ. ಅದನ್ನು ಬಿಡುಗಡೆ ಮಾಡಿ ಎಂದಿದ್ದಾರೆ.
ನಮ್ಮ ಕಾಲದಲ್ಲೂ ಪ್ರವಾಹ ಬಂತು. ಆದರೆ ನಾವೂ ಕೇಂದ್ರಕ್ಕಾಗಿ ಕಾಯುತ್ತ ಕೂರಲಿಲ್ಲ. ಹೇಳಿಕೆಯಿಂದ ಬರಗಾಲ ಪರಿಹಾರ ಆಗಲ್ಲ ಎಂದಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಾನೂ ಯಡವಟ್ಟು ಮಾಡಿಕೊಂಡೇ ಬರುತ್ತಿದೆ. ವರ್ಗಾವಣೆ ವಿಷಯದಲ್ಲಿ ಅಸಮಾಧಾನವಿದೆ. ಎಲ್ಲಾ ಸಮಾಜಕ್ಕೂ ನ್ಯಾಯ ಕೊಡುತ್ತೇವೆ ಎಂದು ಹೇಳಿದ್ದರು, ಆದರೆ ಅದು ಆಗಿಲ್ಲ. ಬೇರೆ ಬೇರೆ ರೂಪದಲ್ಲಿ ಭ್ರಷ್ಟಾಚಾರ ಹೊರಗೆ ಬರುತ್ತಿದೆ. ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ಶಾಮನೂರು ಶಿವಶಂಕರಪ್ಪ ಎದ್ದಿತ್ತಂತಹ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಡಬೇಕಿದೆ ಎಂದು ಒತ್ತಾಯಿಸಿದ್ದಾರೆ.