ಚಿತ್ರದುರ್ಗ,(ಅ.05) : ಚಿತ್ರದುರ್ಗ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ನಾಳೆ (ಅಕ್ಟೋಬರ್ 08 ರಂದು) ನಡೆಯಲಿದ್ದು, ಈ ಕುರಿತು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇದರ್ ಕುಮಾರ್ ಮೀನಾ ಅವರು ತಿಳಿಸಿದರು.
ನಗರದ ಡಿವೈಎಸ್ ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ವ್ಯಾಪಕವಾದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
* ಈ ಬಂದೋಬಸ್ತ್ ಕರ್ತವ್ಯದಲ್ಲಿ ಚಿತ್ರದುರ್ಗದ ಎಸ್.ಪಿ, ನಾಲ್ವರು ಹೆಚ್ಚುವರಿ ಎಸ್.ಪಿ, 16 ಡಿ.ಎಸ್.ಪಿ, 40 ಸಿ.ಪಿ.ಐ, 110 ಪಿ.ಎಸ್.ಐ ಸೇರಿದಂತೆ ಸುಮಾರು 2800 ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
* ನಗರದಾದ್ಯಂತ 60 ವಿಡಿಯೋ ಕ್ಯಾಮೆರಾಗಳು,
ಪ್ರಮುಖ 100 ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಮತ್ತು 29 ಕಣ್ಗಾವಲು ವೇದಿಕೆಗಳನ್ನು ನಿರ್ಮಿಸಲಾಗಿರುತ್ತದೆ ಎಂದು ತಿಳಿಸಿದರು.
ಸಂಚಾರ ಮಾರ್ಗ ಬದಲಾವಣೆ : ಸಾರ್ವಜನಿಕ ಸಂಚಾರ ಸುಗಮಗೊಳಿಸುವ ದೃಷ್ಟಿಯಿಂದ ಅಕ್ಟೋಬರ್ 8ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಗರದ ಮುಖ್ಯರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ಸಂಚರಿಸಲಿರುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮಾರ್ಗ ಬದಲಾವಣೆ ವಿವರ :
ಚಳ್ಳಕೆರೆ ಮಾರ್ಗವಾಗಿ ಬರುವ ವಾಹನಗಳು ಎನ್.ಹೆಚ್-04
ಬೈಪಾಸ್ ಮುಖಾಂತರ ಎ.ಪಿ.ಎಂ.ಸಿ ಮಾರ್ಕೆಟ್ ಮತ್ತು ಜೆ.ಎಂ.ಐ.ಟಿ ವೃತ್ತದ ಮುಖಾಂತರ ಚಿತ್ರದುರ್ಗ ನಗರದೊಳಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಪುನಃ ಅದೇ
ಮಾರ್ಗದಲ್ಲಿ ವಾಪಸ್ ಹೋಗುವುದು.
ಶಿವಮೊಗ್ಗ ಮತ್ತು ದಾವಣಗೆರೆ ಕಡೆಯಿಂದ ಬರುವ
ವಾಹನಗಳು ಮತ್ತು ಬಸ್ಸುಗಳು ಜೆ.ಎಂ.ಐ.ಟಿ ಮುಖಾಂತರ ಚಿತ್ರದುರ್ಗ ನಗರದೊಳಗೆ ಪ್ರವೇಶ ಮಾಡಿ
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೆ ಬಂದು ಅದೇ ಮಾರ್ಗವಾಗಿ ವಾಪಾಸ್ ಹೋಗುವುದು.
ಯಾವುದೇ ಕಡೆಯಿಂದ ಬರುವ ಖಾಸಗಿ ಬಸ್ಸುಗಳು ಮೆದೆಹಳ್ಳಿ ರಸ್ತೆ ಮುಖಾಂತರ ಖಾಸಗಿ ಬಸ್
ನಿಲ್ದಾಣಕ್ಕೆ ಬಂದು ಪುನಃ ಅದೇ ಮಾರ್ಗವಾಗಿ ವಾಪಸ್ ಹೋಗುವುದು.
ಮೆರವಣಿಗೆ ಬರುವಂತಹ ಯಾವುದೇ ವಾಹನಗಳಿಗೆ ನಗರದ ಒಳಗಡೆ ಚಳ್ಳಕೆರೆ ಗೇಟ್‍ನಿಂದ ಹೊಳಲ್ಕೆರೆ ರಸ್ತೆ ಕಣಿವೆ ಕ್ರಾಸ್‍ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಯಾವುದೇ ವಾಹನಗಳ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.
ಕೆಳಕಂಡಂತೆ ನಗರದ 04 ಕಡೆಗಳಲ್ಲಿಯೂ ಸಂಚಾರಿ ನಿಯಂತ್ರಣ ಸಿಬ್ಬಂದಿಯಿಂದ ವಾಹನಗಳಿಗೆ
ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
1) ಶಿವಮೊಗ್ಗ ಮತ್ತು ಹೊಳಲ್ಕೆರೆಯಿಂದ ಬರುವ ವಾಹನಗಳಿಗೆ ಚಂದ್ರವಳ್ಳಿ ಮತ್ತು ಎಸ್.ಜೆ.ಎಂ
ಕಾಲೇಜ್ ಮುಂಭಾಗದ ಮೈದಾನ ಮತ್ತು ಧವಳಗಿರಿ ಬಡಾವಣೆಯ ಡಬಲ್ ರೋಡ್‍ನಲ್ಲಿ
ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಿರುತ್ತದೆ.
2) ದಾವಣಗೆರೆ ಕಡೆಯಿಂದ ಬರುವ ವಾಹನಗಳಿಗೆ ಎ.ಪಿ.ಎಂ.ಸಿ. ಯಾರ್ಡ್‍ನಲ್ಲಿ ವ್ಯವಸ್ಥೆ ಮಾಡಿರುತ್ತಾರೆ.
3) ಎನ್.ಹೆಚ್-13 ರಸ್ತೆಯಿಂದ ಬರುವ ವಾಹನಗಳಿಗೆ ಪೊಲೀಸ್ ಸಮುದಾಯ ಭವನದ ಮುಂದಿನ
ಮೈದಾನದಲ್ಲಿ ನಿಲುಗಡೆ ವ್ಯವಸ್ಥೆ ಮಾಡಿರುತ್ತದೆ.
4) ಚಳ್ಳಕೆರೆ ಮತ್ತು ಹಿರಿಯೂರು ಕಡೆಯಿಂದ ಬರುವ ವಾಹನಗಳಿಗೆ ಶ್ರೀರಾಮ ಕಲ್ಯಾಣ ಮಂಟಪದ
ಬಳಿ ಇರುವ ಖಾಲಿ ಜಾಗ, ಜೈಲ್ ರಸ್ತೆ, ಚಂದ್ರಪ್ಪ ಕಾಲೇಜ್ ಆವರಣದಲ್ಲಿ ನಿಲುಗಡೆಗೆ ವ್ಯವಸ್ಥೆ
ಮಾಡಿರುತ್ತದೆ.
ಮೊಬೈಲ್ ಪೆಟ್ರೋಲಿಂಗ್‍ಗೆ ಸಂಬಂಧಿಸಿದಂತೆ 14 ಸೆಕ್ಟರ್‍ಗಳಾಗಿ ವಿಂಗಡಿಸಿ ಭದ್ರತೆಯನ್ನುಕೈಗೊಳ್ಳಲಾಗಿರುತ್ತದೆ. ಮುಂಜಾಗ್ರತ ಕ್ರಮವಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯಾದ್ಯಂತ 950 ಬೀಟ್ ಮೀಟಿಂಗ್‍ಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳದ 07 ವಾಹನಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
850 ರೌಡಿಗಳು ಮತ್ತು ಕಮ್ಯೂನಲ್ ಗೂಂಡಾಗಳ ಮೇಲೆ ಕಲಂ 107 ಮತ್ತು 108 ಸಿ.ಆರ್.ಪಿ.ಸಿ ರೀತಿಯಲ್ಲಿ ಭದ್ರತಾ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿ ಕೊಡದೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುವ ಸಂದೇಶಗಳಿಗೆ ಗಮನ ಕೊಡದೇ ಶಾಂತಿಯುತವಾಗಿ ಗಣೇಶ ಉತ್ಸವವನ್ನು ಆಚರಿಸಲು ಕೋರಿರುತ್ತದೆ.
ಹಾಗೂ ಶಾಂತಿ ಕದಡುವ ಬಗ್ಗೆ ಮಾಹಿತಿ ಇದ್ದರೆ ಜಿಲ್ಲಾ ನಿಸ್ತಂತು ಕೇಂದ್ರ ದೂರವಾಣಿ ಸಂಖ್ತೆ: 08194-222782
ಮತ್ತು ಮೊ.ನಂ: 9480803100 ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ.
ಜಿಲ್ಲಾಸ್ಪತ್ರೆಗೆ ಬರುವಂತಹ ಅಂಬ್ಯೂಲೆನ್ಸ್‍ಗಳು ತುರುವನೂರು ರಸ್ತೆ ಮುಖಾಂತರ ಹಾಗೂ ಚಳ್ಳಕೆರೆ
ಕ್ರಾಸ್, ಸರಸ್ವತಿಪುರಂ ಮಾರ್ಗವಾಗಿ ಜೋಗಿಮಟ್ಟಿ ರಸ್ತೆ ಮುಖಾಂತರ ಸಂಚಾರಿ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್.ಪಿ. ಧರ್ಮೇಂದ್ರ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.