ಸುದ್ದಿಒನ್, ಚಿತ್ರದುರ್ಗ, ಅ.06 : ಕಲುಷಿತ ನೀರು ಸೇವನೆ ಹಿನ್ನೆಲೆಯಲ್ಲಿ ಸಾವು-ನೋವು ಸಂಭವಿಸಿರುವ ಕವಾಡಿಗರಹಟ್ಟಿ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.6ರಂದು ಬೆಳಗ್ಗೆ 11 ಗಂಟೆಗೆ ಭೇಟಿ ನೀಡಲಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿ ವಿವಿಧ ಉತ್ತಮ ಯೋಜನೆಗಳ ಜಾರಿ ಮೂಲಕ ಕಳೆದ ಆಡಳಿತದಲ್ಲಿ ಎಲ್ಲ ವರ್ಗದ ಜನರ ಹಿತ ರಕ್ಷಣೆಗೆ ಬದ್ಧರಾಗಿ ಜನಪರ ಆಡಳಿತ ನೀಡಿದ್ದ ಸಿದ್ದರಾಮಯ್ಯ, ಎರಡನೇ ಬಾರಿ ಮುಖ್ಯಮಂತ್ರಿ ಆಗುತ್ತಿದ್ದಂತೆ ಮೊದಲ ಸಚಿವ ಸಂಪುಟದಲ್ಲಿಯೇ ಐದು ಗ್ಯಾರಂಟಿ ಯೋಜನೆಗಳ ಜಾರಿ ಘೋಷಣೆ ಮೂಲಕ ರಾಷ್ಟ್ರದ ಗಮನವನ್ನೇ ಸೆಳೆದಿದ್ದಾರೆ. ಜೀವಪರ ಮುಖ್ಯಮಂತ್ರಿ ಎಂದೇ ರಾಷ್ಟ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯ ಅವರು, ಕಲುಷಿತ ನೀರು ಸೇವನೆಯಿಂದ ಸಾವು-ನೋವು ಸಂಭವಿಸಿ, ಸಂಕಷ್ಟಕ್ಕೆ ಸಿಲುಕಿರುವ ನೊಂದ ಜನರಿಗೆ ಸಾಂತ್ವನ ಹೇಳಲು ಕವಾಡಿಗರಹಟ್ಟಿ ಗ್ರಾಮಕ್ಕೆ ಭೇಟಿ ನೀಡುತ್ತಿರುವುದು ಸ್ವಾಗತಾರ್ಹ ಆಗಿದೆ.
ಕವಾಡಿಗರಹಟ್ಟಿ ಭೇಟಿ ಬಳಿಕ ಚಿತ್ರದುರ್ಗದಲ್ಲಿ ವಿವಾಹ ಸಮಾರಂಭ, ನಂತರ ಹಿರಿಯೂರು ಬಬ್ಬೂರು ಗ್ರಾಮದಲ್ಲಿ ಕೃಷಿ ಮತ್ತು ತಂತ್ರಜ್ಞಾನ ಕೇಂದ್ರದ ಶತಮಾನೋತ್ಸವದಲ್ಲಿ ಪಾಲ್ಗೊಳ್ಳುವರು.
ಅತ್ಯಂತ ವಿಶೇಷ ಎಂದರೆ, ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಗೆ ಹೆಚ್ಚು ಮನ್ನಣೆ ನೀಡಲಿದೆ ಎಂಬುದಕ್ಕೆ ಪುಷ್ಠಿ ಎಂಬಂತೆ ವಿದ್ಯಾರ್ಥಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಪಕ್ಷದ ಕಾರ್ಯಕರ್ತ ವಿನಯ್ ಗೋಡೆಮನೆ ಅವರ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿರುವುದು ಬಹಳ ವಿಶೇಷ ಆಗಿದೆ. ಸಿಎಂ ಅವರ ಈ ನಡೆ ಪಕ್ಷದ ಕಾರ್ಯಕರ್ತರದಲ್ಲಿ ಹೆಚ್ಚು ಉತ್ಸಾಹ ತುಂಬಲಿದೆ ಎಂದು ಎಚ್.ಆಂಜನೇಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.