ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ಗಲಭೆ ನಡೆದಿದೆ. ಸದ್ಯಕ್ಕೆ ಶಿವಮೊಗ್ಗದಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು ಪರಿಸ್ಥಿತಿ ಹತೋಟಿಯಲ್ಲಿದೆ. ಇಂದು ಗಲಾಟೆ ನಡೆದ ಸ್ಥಳಕ್ಕೆ ಬಿನೆಪಿಯ ಸತ್ಯ ಶೋಧನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಘಟನೆಯ ಸಂಪೂರ್ಣ ಮಾಹಿತಿ ಪಡೆಯಲಿದೆ.
ಸತ್ಯಶೋಧನಾ ತಂಡದಲ್ಲಿ ನಳೀನ್ ಕುಮಾರ್ ಕಟೀಲ್, ಈಶ್ಚರಪ್ಪ, ಅಶ್ವತ್ಥ್ ನಾರಾಯಣ್, ಆರಗ ಜ್ಞಾನೇಂದ್ರ, ಬಿವೈ ರಾಘವೇಂದ್ರ, ರವಿಕುಮಾರ್, ಶಾಸಕ ಚನ್ನಬಸಪ್ಪ ಸೇರಿದಂತೆ ಹಲವರು ಈ ತಂಡದಲ್ಲಿ ಇರಲಿದ್ದಾರೆ. ನೇರವಾಗಿ ಘಟನೆ ನಡೆದ ಸ್ಥಳಕ್ಕೆ ಹೋಗಿ, ಅಲ್ಲಿ ಪರಿಶೀಲನೆ ನಡೆಸಲಿದ್ದಾರೆ.
ಗಲಭೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೌಹಾರಿತ್ತು. ಅದರ ಮುಂದುವರೆದ ಭಾಗವೇ ಇಂದು ಸತ್ಯಶೋಧನೆ ಮಾಡಲು ಹೊರಟಿದೆ. ಅಲ್ಲಿ ಏನೆಲ್ಲಾ ಆಯ್ತು ಎಂಬ ಮಾಹಿತಿ ಕಲೆ ಹಾಕಲಿದ್ದಾರೆ. ಶಿವಮೊಗ್ಗದಲ್ಲಿ ಭಾನುವಾರದಂದು ಈದ್ ಮಿಲಾದ್ ಮೆರವಣಿಗೆ ನಡೆದಿತ್ತು. ಈ ವೇಳೆ ಬೀದಿ ಬೀದಿಯಲ್ಲಿ ತಲ್ವಾರ್ ಹಿಡಿದು ಪ್ರದರ್ಶನ ಮಾಡಲಾಗಿದೆ ಎನ್ನಲಾಗಿದೆ. ಈ ವೇಳೆ ಪಿಂಡರ ಗುಂಪು ಜನರ ಮೇಲೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಜಿಲ್ಲೆಯಲ್ಲಿ ಈಗಲೂ 144 ಸೆಕ್ಷನ್ ಜಾರಿಯಲ್ಲಿದೆ. ಪೊಲೀಸರಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.