ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.29 : ನೆರೆಯ ರಾಜ್ಯ ತಮಿಳುನಾಡಿಗೆ ಪ್ರತಿನಿತ್ಯವೂ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಜನಪರ ಸಂಘಟನೆಗಳು, ಹೋರಾಟಗಾರರು, ರೈತರು ಶುಕ್ರವಾರ ಕರ್ನಾಟಕ ಬಂದ್‍ಗೆ ಕರೆ ನೀಡಿರುವುದನ್ನು ಬೆಂಬಲಿಸಿ ನಡೆಸಿದ ಚಿತ್ರದುರ್ಗ ಬಂದ್ ಭಾಗಶಃವಾಗಿತ್ತು.
ಮುಖ್ಯ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕ್‍ಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ, ಖಾಸಗಿ ಬಸ್‍ಗಳು ಹಾಗೂ ಆಟೋರಿಕ್ಷಾಗಳು ಮಾಮೂಲಿನಂತೆ ಸಂಚರಿಸುತ್ತಿದ್ದವು.
ಗಾಂಧಿವೃತ್ತದಲ್ಲಿ ಬೆಳಿಗ್ಗೆಯೇ ಜಮಾಯಿಸಿದ್ದ ಕಾರ್ಮಿಕ ಮುಖಂಡರು, ರೈತರು, ವಿವಿಧ ಸಂಘಟನೆಗಳ ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರಕ್ಕೆ ರಕ್ತದ ಅಭಿಷೇಕ ಮಾಡಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಹಾಗೂ ಮಹಿಳಾ ಅಧ್ಯಕ್ಷೆ ವೀಣಗೌರಣ್ಣ ಮತ್ತು ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿ ವ್ಯಾನ್‍ನಲ್ಲಿ ಕರೆದೊಯ್ದರು.
ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿರವರ ಅಣುಕು ಶವಯಾತ್ರೆ ನಡೆಸಲು ಹೊರಟ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‍ಕುಮಾರ್‍ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಎಸ್.ಕೆ.ಮಹಂತೇಶ್ ಮತ್ತಿತರರನ್ನು ಪೊಲೀಸರು ಬಂಧಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಗಾಂಧಿವೃತ್ತದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ದೇಶದಲ್ಲಿ 95 ಕೋಟಿ ಕಾರ್ಮಿಕರು, ರೈತರಿದ್ದಾರೆ. ರೈತರು ಕಾರ್ಮಿಕರ ಪರವಾಗಿದ್ದೇವೆಂದು ಹೇಳಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಪ್ರತಿ ವರ್ಷವೂ ಕರ್ನಾಟಕದ ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು?
ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗಲಿದೆ. ಆಗ ಕಾರ್ಮಿಕರು, ರೈತರು ಕಾಂಗ್ರೆಸ್ ಮತ್ತು ಕೇಂದ್ರದ ಬಿಜೆಪಿ. ಸರ್ಕಾರದ ವಿರುದ್ದ ಮತ ಚಲಾಯಿಸಿ ಪರ್ಯಾಯ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು. ಈಗಲಾದರೂ ಆಳುವ ಸರ್ಕಾರಗಳು ಎಚ್ಚೆತ್ತುಕೊಂಡು ರೈತರ ಹಾಗೂ ಕಾರ್ಮಿಕ ಹಿತ ಕಾಪಾಡಬೇಕೆಂದು ಎಚ್ಚರಿಸಿದರು.
ಕರ್ನಾಟಕ ಸರ್ವೋದಯ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಜಲಕ್ಕೆ ಅನ್ಯಾಯವಾಗುತ್ತಿದ್ದರೂ ಆಳುವ ಪಕ್ಷಗಳು ಸುಮ್ಮನಿರುವುದು ನೋವಿನ ಸಂಗತಿ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್. ಪಕ್ಷಗಳು ಅಸಹಾಯಕವಾಗಿರುವುದರಿಂದ ಜನಸಾಮಾನ್ಯರೆ ಬೀದಿಗಿಳಿದು ಹೋರಾಟ ಮಾಡುವಂತ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಮಿಳುನಾಡಿಗೆ ಕಾವೇರಿ ನೀರು ಬಿಡುವುದಾಗಿ ನಗು ನಗುತ್ತಾ ಹೇಳುತ್ತಿರುವುದು ರಾಜ್ಯದ ಸಮಸ್ತ ಕನ್ನಡಿಗರಿಗೆ ಅವಮಾನವಾದಂತಾಗಿದೆ. ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕೆಂದು ಒತ್ತಾಯಿಸಿದರು.
ಕಾವೇರಿ ಉಳಿವಿಗಾಗಿ ರಾಜ್ಯದಲ್ಲಿ ಕನ್ನಡಿಗರೆ ಹೋರಾಟ ಮಾಡಬಾರದೆನ್ನುವುದಾದರೆ ಕರ್ನಾಟಕದ ಪರ ತಮಿಳುನಾಡಿನವರು ಹೋರಾಟ ಮಾಡಬೇಕಾ? ರಾಜ್ಯ ಸರ್ಕಾರ ಇಂತಹ ತಿಕ್ಕಲುತನವನ್ನು ಬಿಡಬೇಕು. ಅವೈಜ್ಞಾನಿಕ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿರುವುದರಿಂದ ಜನರೆ ಬೀದಿಗಿಳಿಯಬೇಕಾಗಿದೆ. ರಾಜ್ಯದೆಲ್ಲೆಡೆ ಹೋರಾಟಗಾರರನ್ನು ಬಂಧಿಸಿ ಪ್ರಜಾಪ್ರಭುತ್ವವವನ್ನು ಕಗ್ಗೊಲೆ ಮಾಡಲಾಗುತ್ತಿದೆ. ರಾಜಕಾರಣಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ರಾಜ್ಯದ ಜನರನ್ನು ಬಲಿಕೊಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ, ಕೃಷ್ಣ, ಕಾವೇರಿಯನ್ನು ರಾಜ್ಯ ಸರ್ಕಾರ ಬಿಡಿ ಬಿಡಿಯಾಗಿ ನೋಡುವುದು ಬೇಡ. ಸಮಾನವಾಗಿ ಕಂಡು ಉಳಿವಿಗಾಗಿ ಗಂಭೀರ ಚಿಂತನೆ ನಡೆಸಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಸಮನ್ವಯತೆ ಕಾಪಾಡಿಕೊಂಡು ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅಲ್ಲಿಯತನಕ ನಮ್ಮ ಹೋರಾಟ ನಿರಂತರವಾಗಿರುತ್ತದೆಂದು ಹೇಳಿದರು.
ಕಾರ್ಮಿಕ ಮುಖಂಡರುಗಳಾದ ಬಿ.ಬಸವರಾಜಪ್ಪ, ಟಿ.ಆರ್.ಉಮಾಪತಿ, ಜಯದೇವಮೂರ್ತಿ, ರಾಜಪ್ಪ, ಈ.ಸತ್ಯಕೀರ್ತಿ, ತಿಪ್ಪೇಸ್ವಾಮಿ, ರವಿಕುಮಾರ್, ಬಾಬು, ಚಂದ್ರಪ್ಪ, ದುರುಗೇಶ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಕೆ.ಗೌಸ್‍ಪೀರ್, ಡಿ.ಈಶ್ವರಪ್ಪ, ತಿಮ್ಮಯ್ಯ, ಇಮಾಂ ಮೊಹಿದ್ದೀನ್, ಸ್ವಾಮಿ ಎಂ.ಆರ್, ರೈತ ಮುಖಂಡರುಗಳಾದ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ, ಲಕ್ಷ್ಮಿಕಾಂತ್, ಪುಟ್ಟರಂಗಪ್ಪ, ರುದ್ರಪ್ಪ, ತಿಪ್ಪೇಸ್ವಾಮಿ, ಕುಮಾರ್, ಸಿದ್ದಪ್ಪ ಇನ್ನು ಅನೇಕರು ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಹೆಚ್.ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್ ಹಾಗೂ ಪದಾಧಿಕಾರಿಗಳು ಬಂದ್‍ಗೆ ಬೆಂಬಲಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನವ ಪ್ರಜಾ ರಕ್ಷಣಾ ವೇದಿಕೆ ಕಾರ್ಯಕರ್ತರು ಬಂದ್‍ಗೆ ಬೆಂಬಲಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.
ಕಾವೇರಿ ಮತ್ತು ಮಹಾದಾಯಿ ನದಿ ನೀರಿನ ವಿಚಾರವಾಗಿ ಹಲವು ದಶಕಗಳಿಂದಲೂ ರಾಜ್ಯದಲ್ಲಿ ಹೋರಾಟ ನಡೆಯುತ್ತಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್‍ಗೆ ವಿವಿಧ ಸಂಘಟನೆಗಳು ಕರೆ ನೀಡಿರುವುದನ್ನು ಬೆಂಬಲಿಸಿ ಜಯ ಕರ್ನಾಟಕ ಸಂಘಟನೆ ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಜಯಕರ್ನಾಟಕ ಜಿಲ್ಲಾಧ್ಯಕ್ಷ ಆರ್.ರಾಜೇಶ್‍ಮದರಿ ಮಾತನಾಡಿ ಪ್ರತಿ ವರ್ಷವೂ ಕಾವೇರಿ ನೀರಿಗಾಗಿ ತಮಿಳುನಾಡು ಖ್ಯಾತೆ ತೆಗೆಯುತ್ತಿದ್ದು, ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗದ ಪರಿಣಾಮ ಹೋರಾಟಗಾರರು, ರೈತರು, ವಿವಿಧ ಜನಪರ ಸಂಘಟನೆಗಳು ಬೀದಿಗಿಳಿದು ಹೋರಾಡಬೇಕಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕರ್ನಾಟಕ ಮತ್ತು ತಮಿಳನಾಡು ಮಧ್ಯೆ ಏರ್ಪಟ್ಟಿರುವ ಜಲವಿವಾದವನ್ನು ಬಗೆಹರಿಸಲಿ ಎಂದು ಜಿಲ್ಲಾಡಳಿತದ ಮೂಲಕ ವಿನಂತಿಸಿದರು.
ಜಯಕರ್ನಾಟಕ ಕಾರ್ಯಾಧ್ಯಕ್ಷ ಅರುಣ್‍ಕುಮಾರ್, ಉಪಾಧ್ಯಕ್ಷ ಬಿ.ಮಂಜುನಾಥ್‍ಸೇನ್, ಬಾಬು, ಪ್ರಕಾಶ್‍ಮಲ್ಲಾಪುರ, ತಾಲ್ಲೂಕು ಅಧ್ಯಕ್ಷ ಸುನಿಲ್‍ಕುಮಾರ್, ಅಭಿಲಾಷ್, ಪ್ರವೀಣ್‍ಕುಮಾರ್, ಹರ್ಬಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗಾಂಧಿವೃತ್ತ, ಎಸ್.ಬಿ.ಎಂ.ಸರ್ಕಲ್, ಜಿಲ್ಲಾಧಿಕಾರಿ ವೃತ್ತ, ಕೆ.ಎಸ್.ಆರ್.ಟಿ.ಸಿ. ಖಾಸಗಿ ಬಸ್‍ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.