ಇಂದು IND vs AUS ಮೂರನೇ ಏಕದಿನ ಪಂದ್ಯ : ಉಭಯ ತಂಡಗಳಿಗೂ ಗೆಲ್ಲುವ ಅನಿವಾರ್ಯತೆ ಯಾಕೆ ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…!
ಸುದ್ದಿಒನ್ : ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಗೆದ್ದಿರುವ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.
ವಿಶ್ವಕಪ್‌ಗೂ ಮುನ್ನ ನಡೆದ ಕೊನೆಯ ಏಕದಿನ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಮೆಗಾ ಟೂರ್ನಿಗೆ ಪ್ರವೇಶಿಸಲು ಕಾತರರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂರನೇ ಏಕದಿನ ಪಂದ್ಯ ಬುಧವಾರ ರಾಜ್ ಕೋಟ್ ನಲ್ಲಿ ನಡೆಯಲಿದೆ.
ಭಾರತ ಇದುವರೆಗೆ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ವೈಟ್‌ವಾಶ್ ಮಾಡಿಲ್ಲ. ಹಾಗಾಗಿ ಈ ಅವಕಾಶವನ್ನು ಬಳಸಿಕೊಂಡು ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಹಠ ಭಾರತದ್ದಾಗಿದೆ. ಅದೇ ರೀತಿ ಏಕದಿನ ವಿಶ್ವಕಪ್‌ನಂತಹ ಮೆಗಾ ಟೂರ್ನಮೆಂಟ್‌ಗೂ ಮುನ್ನ ಕಾಂಗರೂಗಳು ಭಾರತದ ಕೈಯಲ್ಲಿ ವೈಟ್‌ವಾಶ್‌ನಿಂದ ಪಾರಾಗಬೇಕೆಂಬ ಹಠ ಮತ್ತೊಂದೆಡೆ. ಉಭಯ ತಂಡಗಳಿಗೂ ಈ ಪಂದ್ಯವನ್ನು ಗೆಲ್ಲಲೇಬೇಕೆಂಬ ಅನಿವಾರ್ಯತೆ ಇದೆ.
ಮೊದಲೆರಡು ಏಕದಿನ ಪಂದ್ಯಗಳಿಂದ ಗೈರುಹಾಜರಾಗಿದ್ದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್ ಈ ಪಂದ್ಯದಲ್ಲಿ ಆಡಲಿದ್ದಾರೆ.
ಏಕದಿನ ವಿಶ್ವಕಪ್‌ಗೂ ಮುನ್ನ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ ಈಗಾಗಲೇ ಆಸೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಇಂದು ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಕೇವಲ 13 ಆಟಗಾರರು ಲಭ್ಯವಿದ್ದಾರೆ.
ಕಾರಣಾಂತರಗಳಿಂದ ಉಳಿದ ಆಟಗಾರರು ಆಯ್ಕೆಯಿಂದ ಹೊರಗುಳಿದಿದ್ದಾರೆ. ಕಳೆದ ಕೆಲ ದಿನಗಳಿಂದ ಬಿಡುವಿಲ್ಲದೆ ಕ್ರಿಕೆಟ್ ಆಡುತ್ತಿರುವ ಶುಭಮನ್ ಗಿಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ವೇಗಿಗಳಾದ ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಹಾರ್ದಿಕ್ ಪಾಂಡ್ಯ ವೈಯಕ್ತಿಕ ಕಾರಣಗಳಿಂದ ಆಡುತ್ತಿಲ್ಲ. ಜ್ವರದ ಕಾರಣ ಕೆಲವು ಆಟಗಾರರು ಆಯ್ಕೆಗೆ ಅಲಭ್ಯರಾಗಿದ್ದಾರೆ. ಮೂರನೇ ಏಕದಿನ ಪಂದ್ಯಕ್ಕೆ 13 ಆಟಗಾರರು ಲಭ್ಯರಿದ್ದಾರೆ ಎಂದು ನಾಯಕ ರೋಹಿತ್ ಬಹಿರಂಗಪಡಿಸಿದ್ದಾರೆ.
ಮೊದಲೆರಡು ಏಕದಿನ ಪಂದ್ಯಗಳಲ್ಲಿ ಆಲ್ ರೌಂಡ್ ಪ್ರದರ್ಶನ ತೋರಿದ ಭಾರತ, ಕೊನೆಯ ಏಕದಿನ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಕುಲದೀಪ್ ಯಾದವ್ ಆಗಮನದಿಂದ ಸ್ಪಿನ್ ವಿಭಾಗ ಬಲಿಷ್ಠವಾಗಿದೆ. ರೀ ಎಂಟ್ರಿ ನಂತರ ಉತ್ತಮ ಇನ್ನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ ಅದೇ ವಿಶ್ವಾಸದಲ್ಲಿದ್ದಾರೆ. ಅದೇ ರೀತಿ ಸೂರ್ಯಕುಮಾರ್ ಯಾದವ್ ಮೆಗಾ ಟೂರ್ನಮೆಂಟ್‌ಗೆ ಮೊದಲು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ.
ಗಿಲ್ ಅನುಪಸ್ಥಿತಿಯಲ್ಲಿ, ರೋಹಿತ್ ಶರ್ಮಾ ಜೊತೆಗೆ ಇಶಾನ್ ಕಿಶನ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುತ್ತಾರೆಂದು ನಿರೀಕ್ಷಿಸಲಾಗಿದೆ.
ರಾಜ್ ಕೋಟ್ ಪಿಚ್ ಬ್ಯಾಟರ್‌ಗಳಿಗೆ ಸೂಕ್ತವಾಗಿದ್ದು, ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ.
ತಂಡಗಳ ವಿವರ :
ಭಾರತ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ , ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.