ಸುದ್ದಿಒನ್, ಚಿತ್ರದುರ್ಗ, ಸೆ.25 : ವಿದ್ಯಾರ್ಥಿ ಜೀವನದಲ್ಲಿ ನಿಮ್ಮ ಮಿತ್ರರೂ ನೀವೇ ಹಾಗೂ ಶತ್ರು ನೀವೇ. ವಿದ್ಯಾರ್ಥಿಯ ದಿನಗಳಲ್ಲಿ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಿ ಮುಂದೆ ಏನಾಗಬೇಕು ಎಂದು ಶಿಕ್ಷಕರ ಮಾರ್ಗದರ್ಶನ ಪಡೆಯಿರಿ. ಸದ್ಯದ ಪರಿಸ್ಥಿತಿಯಲ್ಲಿ ಮನಸ್ಸನ್ನು ಹರಿ ಬಿಡಲು ವಾಟ್ಸಾಪ್, ಫೇಸ್ ಬುಕ್, ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಕೆಯಿಂದ ನಿಮ್ಮ ವಿದ್ಯಾರ್ಥಿ ಜೀವನಕ್ಕೆ ಮಾರಕವಾಗದೆ ಇರಲಿ ಎಂದು ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.
ನಗರದ ಎಸ್ ಜೆ ಎಂ ಫಾರ್ಮಸಿ ಕಾಲೇಜಿನಲ್ಲಿ ಇಂದು ನೂತನ ಶೈಕ್ಷಣಿಕ ವರ್ಷದ ಮಕ್ಕಳಿಗೆ ಸ್ವಾಗತ ಹಾಗೂ ವಿಶ್ವ ಔಷಧಿ ತಜ್ಞರ ದಿನ-2023 ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಹೊಸದಾಗಿ ಶೈಕ್ಷಣಿಕ ವರ್ಷಕ್ಕೆ ಕಾಲಿಟ್ಟ ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಮಾತನಾಡಿದರು.
25 ವರ್ಷ ಶ್ರಮಪಟ್ಟು ನಿಷ್ಠೆಯಿಂದ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿ ಜೀವನವನ್ನು ಬಂಗಾರವಾಗಿರಿಸಿಕೊಂಡರೆ 75 ವರ್ಷದ ತನಕ ಸುಖವಾಗಿ ಬಾಳಬಹುದು. ಮರೆತರೆ ಜೀವನಪೂರ್ತಿ ಬಲು ಕಷ್ಟ ಪಡಬೇಕಾಗುತ್ತದೆ ಎಂದು ಶ್ರೀ ಗಳು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ, ಹುರುಳಿ ಎಂ ಬಸವರಾಜ್ ಹೊಸ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆತ್ಮವಿಶ್ವಾಸ ಸಮಯಪ್ರಜ್ಞೆ ನಿಷ್ಠೆ ಕೀಳರಮೆ ಹಿಂಜರಿಕೆ ಬಿಟ್ಟು ಓದಿನ ಕಡೆ ಗಮನಹರಿಸಿದರೆ ಬದುಕು ಸುಂದರವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಅನೇಕ ಕೆಟ್ಟ ಹವ್ಯಾಸಗಳು ವಿದ್ಯಾರ್ಥಿ ಜೀವನವನ್ನು ಹಾಳು ಮಾಡುತ್ತಿವೆ ಅದರಿಂದ ದೂರವಿರಿ ಎಂದು ಹೇಳಿದರು.
ಸ್ವಾಗತವನ್ನು ಪ್ರಾಂಶುಪಾಲರು ಡಾ ಟಿ ಎಸ್ ನಾಗರಾಜ್ ನೆರವೇರಿಸಿ ಔಷಧ ವಿಜ್ಞಾನ ಸೇರಿದ ಮಕ್ಕಳಿಗೆ ಶುಭವನ್ನು ಕೋರುತ್ತಾ ಔಷಧ ವಿಜ್ಞಾನದ ಹಲವು ಪ್ರಮುಖ ವಿಭಾಗಗಳನ್ನು ಅದರ ಬೆಳವಣಿಗೆಯನ್ನು ತಿಳಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ವಿನಯ್ ಆರ್ ಉಪನ್ಯಾಸಕರು ನಿರ್ವಹಣೆಯನ್ನು ಅಂತಿಮ ವರ್ಷದ ವಿದ್ಯಾರ್ಥಿನಿಯಾದ ರಕ್ಷಿತಾ ನೆರವೇರಿಸಿದರು. ಪ್ರಾರ್ಥನೆಯನ್ನು ಚೈತ್ರ ಹಾಗೂ ಸಂಗಡಿಗರು ಹಾಡಿದರು.
ಕಾರ್ಯಕ್ರಮದಲ್ಲಿ ಹೊಸ ಶೈಕ್ಷಣಿಕ ವರ್ಷದ 125 ಬಿ ಫಾರ್ಮ, ಫಾರ್ಮಡಿ ಹಾಗೂ ಡಿ ಫಾರ್ಮ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.