ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.21 : ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪನವರು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದರು. ಅದೆ ರೀತಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಯ ಪರವಾಗಿ ನಿರ್ಧಾರ ತೆಗೆದುಕೊಂಡಿರುವುದರಿಂದ ನಾವುಗಳೆಲ್ಲಾ ಅವರ ಜೊತೆ ನಿಲ್ಲುತ್ತೇವೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಎರಡು ರಾಜ್ಯಗಳಿಗೆ ಸಮಾಧಾನವಾಗುವ ರೀತಿ ನಿರ್ಧಾರ ತಾಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ 1991 ರಲ್ಲಿ ರಾಜ್ಯದ ಜಲಾಶಯಗಳಲ್ಲಿ ನೀರಿರಲಿಲ್ಲ. ಈಗ ಅದಕ್ಕಿಂತಲೂ ಪರಿಸ್ಥಿತಿ ಕೆಟ್ಟದಾಗಿದೆ. ಕೇಂದ್ರ ಸರ್ಕಾರ ವಾಸ್ತವವನ್ನು ತಿಳಿದುಕೊಳ್ಳಬೇಕು. ಅನೇಕ ಮುಖ್ಯಮಂತ್ರಿಗಳು ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೋಗುವುದು ಅಂದಿನಿಂದಲೂ ನಡೆದುಕೊಂಡು ಬರುತ್ತಿದೆ. ವಿವಾದ ಕೋರ್ಟ್‍ನಲ್ಲಿದೆ ಎಂದರು.
ನಾನು ಶಿಕ್ಷಣ ಸಚಿವನಾಗಿ ಅಧಿಕಾರ ತೆಗೆದುಕೊಳ್ಳುವಾಗ 53 ಸಾವಿರ ಶಿಕ್ಷಕರ ಕೊರತೆಯಿತ್ತು. 43 ಸಾವಿರ ಅತಿಥಿ ಶಿಕ್ಷಕರುಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಹದಿಮೂರು ಸಾವಿರ ಶಿಕ್ಷಕರಿಗೆ ಆರ್ಡರ್ ಕೊಡಬೇಕು. ಪಠ್ಯಪುಸ್ತಕ ಪರಿಷ್ಕರಣೆ, ಒಂದು ವರ್ಷಕ್ಕೆ ಮೂರು ಪರೀಕ್ಷೆ ಇಂತಹ ಮಹತ್ವದ ನಿರ್ಧಾರಗಳನ್ನು 125 ದಿನಗಳಲ್ಲಿ ತೆಗೆದುಕೊಂಡಿದ್ದೇನೆ. ರಾಜ್ಯದ ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಕ್ಕಳಿಗೆ ಮೂಲಭೂತ ಸೌಲಭ್ಯ, ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೆಚ್ಚು ತೆರೆಯಲಾಗುವುದು. ಮುಂದಿನ ದಿನಗಳಲ್ಲಿ ಶಿಕ್ಷಕರುಗಳ ಕೊರತೆಯನ್ನು ನೀಗಿಸುವುದಕ್ಕಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದೇನೆಂದರು.