ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ : ದೇಶದ ಪ್ರಧಾನಿ ನರೇಂದ್ರಮೋದಿ ಮಹಿಳೆಯರಿಗೆ ರಾಜಕೀಯದಲ್ಲಿ ಶೇ.33 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿ ಲೋಕಸಭೆಯಲ್ಲಿ ಮಸೂದೆ ಮಂಡಿಸಿರುವುದಕ್ಕೆ ಬಿಜೆಪಿ. ನಗರ ಮಹಿಳಾ ಮೋರ್ಚಾದಿಂದ ಹೊಳಲ್ಕೆರೆ ರಸ್ತೆಯಲ್ಲಿ ಗುರುವಾರ ಸಂಭ್ರಮ ಆಚರಿಸಿ ಸಿಹಿ ವಿತರಿಸಲಾಯಿತು.
ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ರಾಜಕೀಯದಲ್ಲಿ ಮಹಿಳೆಗೆ ಶೇ.33 ರಷ್ಟು ಮೀಸಲಾತಿ ಕೊಡುವ ಮಸೂದೆ ಮಂಡಿಸಿರುವ ಪ್ರಧಾನಿ ನರೇಂದ್ರಮೋದಿರವರು ಒಂಬತ್ತು ವರ್ಷಗಳ ತಮ್ಮ ಅಧಿಕಾರವಧಿಯಲ್ಲಿ ಮಹಿಳಾ ಸಬಲೀರಕರಣಕ್ಕಾಗಿ ಜಾರಿಗೆ ತಂದಿರುವ ಅನೇಕ ಉಪಯುಕ್ತ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಕೆಲಸವಾಗಬೇಕು. ಉಜ್ವಲ್ ಯೋಜನೆಯಡಿ ಬಡ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ವಿತರಿಸಿರುವುದರ ಜೊತೆಗೆ ಆಕಸ್ಮಿಕವಾಗಿ ಏನಾದರೂ ಅಪಘಾತವಾದರೆ ಎರಡು ಲಕ್ಷ ರೂ.ಗಳ ಜೀವವಿಮ ಬಾಂಡ್ ನೀಡಿದ್ದಾರೆ. ಮಾತೃ ವಂದನಾ, ಭಾಗ್ಯಲಕ್ಷ್ಮಿ, ಪ್ರೌಢಶಾಲಾ ಮಕ್ಕಳಿಗೆ ಸೈಕಲ್, ಪ್ರತಿಯೊಬ್ಬರಿಗೂ ಶುದ್ದ ನೀರು ಕುಡಿಯಲಿ ಎಂದು ಆರ್.ಓ. ಫಿಲ್ಟರ್, ಜಲಜೀವನ್ ಮಿಷನ್, ಜನಧನ್ ಖಾತೆ, ಕೋವಿಡ್‍ನಲ್ಲಿ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ಐದು ನೂರು ರೂ. ಇಷ್ಟೆಲ್ಲಾ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಿರುವ ಪ್ರಧಾನಿ ಮೋದಿ ರಾಜಕೀಯವಾಗಿ ಶಕ್ತಿ ತುಂಬುವುದಕ್ಕಾಗಿ ಶೇ.33 ಮೀಸಲಾತಿ ಮಸೂದೆ ಮಂಡಿಸಿರುವುದರಿಂದ ರಾಜ್ಯ ವಿಧಾನಸಭೆಯಲ್ಲಿ 68 ಮಹಿಳೆಯರು ಶಾಸಕರಾಗಬಹುದು ಎಂದು ಗುಣಗಾನ ಮಾಡಿದರು.
ಬಿಜೆಪಿ. ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶೀಲ ಶ್ರೀನಿವಾಸ್ ಮಾತನಾಡಿ ದೇಶದ ಪ್ರಧಾನಿ ನರೇಂದ್ರಮೋದಿರವರು ಮಹಿಳೆಯರಿಗೆ ರಾಜಕೀಯವಾಗಿ ಶೇ.33 ಪರ್ಸೆಂಟ್ ಘೋಷಿಸಿ ಮಸೂಸೆ ಮಂಡಿಸಿರುವುದರಿಂದ ಮಹಿಳೆಯರಿಗೆ ಬಲ ಬಂದಂತಾಗಿದೆ. ಇದರಿಂದ ಮಹಿಳೆ ಕೇವಲ ಅಡುಗೆ ಮನೆಗೆ ಮೀಸಲಲ್ಲ. ಎಲ್ಲಾ ರಂಗದಲ್ಲಿಯೂ ಮುಂದೆ ಬರಲು ನೆರವಾಗಲಿದೆ ಎಂದು ಹೇಳಿದರು.
ಬಿಜೆಪಿ. ಎಸ್ಸಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್ ಮಾತನಾಡಿ ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣ ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಆಶಯಗಳನ್ನು ಎತ್ತಿಹಿಡಿದಿರುವ ದೇಶದ ಪ್ರಧಾನಿ ನರೇಂದ್ರಮೋದಿ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಯನ್ನು ಘೋಷಿಸಿ ಮಸೂದೆ ಮೂಲಕ ಜಾರಿಗೊಳಿಸಿ ಹೆಣ್ಣು ಮನೆಗಷ್ಟೇ ಸೀಮಿತಳಲ್ಲ ಎಲ್ಲಾ ರಂಗಗಳಲ್ಲಿಯೂ ಪುರುಷರಿಗೆ ಸಮಾನವಾಗಿ ಬೆಳೆಯಬಹುದು ಎನ್ನುವುದನ್ನು ತೋರಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ.ನಗರ ಮಹಿಳಾ ಮೋರ್ಚಾ ಗ್ರಾಮಾಂತರ ಅಧ್ಯಕ್ಷೆ ವೀಣ, ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ವರಿ, ಅರುಣ, ಕಾರ್ಯದರ್ಶಿ ಶ್ರೀದೇವಿ, ಪದಾಧಿಕಾರಿಗಳಾದ ಸರಸ್ವತಿ, ಚಂದ್ರಕಲಾ, ಶ್ರೀಕಾಂತಮ್ಮ, ಉಮಾದೇವಿ, ಚಂದ್ರಮ್ಮ, ರಾಣಿ, ಸುಧ, ನಗರಸಭೆ ಸದಸ್ಯೆ ಭಾಗ್ಯಮ್ಮ, ಬಿಜೆಪಿ. ಜಿಲ್ಲಾ ಉಪಾಧ್ಯಕ್ಷ ಸಂಪತ್‍ಕುಮಾರ್, ನಗರ ಮೋರ್ಚಾ ಕಾರ್ಯದರ್ಶಿ ಕಿರಣ್, ಸಮಾಜ ಸೇವಕ ಎನ್.ಕೆ.ಪ್ರಸಾದ್‍ಬಾಬು ಈ ಸಂದರ್ಭದಲ್ಲಿ ಹಾಜರಿದ್ದರು.