ಮಂಡ್ಯ: ಕಾವೇರಿ ನದಿಯಲ್ಲಿ ನೀರು ದಿನೇ ದಿನೇ ಕಡಿಮೆ ಆಗುತ್ತಲೇ ಇದೆ. ಈ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೂಡ ತಮಿಳುನಾಡಿನ ಪರವಾಗಿಯೇ ಆದೇಶ ಕೊಟ್ಟಿದೆ. ಹೀಗಾಗಿ ರೈತರು ಕೆರಳಿ ಕೆಂಡವಾಗಿದ್ದಾರೆ. ಬಂಗಾರಪ್ಪ ಅವರಂತೆ ನಿರ್ಧಾರ ತೆಗೆದುಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ.
ಕಾವೇರಿ ನದಿ ನೀರಿನ ಹೋರಾಟ ನಿನ್ನೆ ಮೊನ್ನೆಯದ್ದಲ್ಲ. ಬಂಗಾರಪ್ಪ ಅವರು ಸಿಎಂ ಆಗಿದ್ದ ಕಾಲದಲ್ಲೂ ಕಾವೇರಿ ಹೋರಾಟ ನಡೆಯುತ್ತಿತ್ತು. ಆ ವೇಳೆ ಸುಗ್ರಿವಾಜ್ಞೆ ತಂದು, ತಮಿಳುನಾಡಿಗೆ ಸೆಡ್ಡು ಹೊಡೆದಿದ್ದರು. ಆ ದಿನಗಳನ್ನು ಇದೀಗ ರೈತರು ನೆನಪಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೂ ಒತ್ತಾಯಿಸುತ್ತಿದ್ದಾರೆ. 1991ರಲ್ಲಿ ಬಂಗಾರಪ್ಪ ಅವರು ಎಷ್ಟು ಗಟ್ಟಿ ನಿರ್ಧಾರ ಮಾಡಿದ್ದರೋ, ನೀವೂ ಕೂಡ ಅಷ್ಟೇ ಗಟ್ಟಿ ನಿರ್ಧಾರ ಮಾಡಬೇಕಾಗಿದೆ. ಅದೇ ರೀತಿ ಸುಗ್ರಿವಾಜ್ಞೆ ತನ್ನಿ ಎನ್ನುತ್ತಿದ್ದಾರೆ.
ಅಷ್ಟಕ್ಕೂ ಅಂದು ಏನಾಗಿತ್ತು..?
1991 ರಲ್ಲಿ ತಮಿಳುನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಕಾವೇರಿ ಟ್ರಿಬ್ಯೂನಲ್ ಆದೇಶ ನೀಡಿತ್ತು. ಆದರೆ ಆ ಸಂದರ್ಭದಲ್ಲಿ ತೀರ್ಪಿಗೆ ವಿರುದ್ಧವಾಗಿ ನಿಂತಿದ್ದವರು ಆಗಿನ ಸಿಎಂ ಬಂಗಾರಪ್ಪನವರು. ಡ್ಯಾಂನಲ್ಲಿರುವ ನೀರನ್ನು ನಮ್ಮ ರಾಜ್ಯಕ್ಕೆ ಸಂಗ್ರಹಿಸಿಡುವಂತೆ ಆದೇಶ ನೀಡಿದ್ದರು. ಇದೇ ವಿಚಾರವಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೂ ಬಂಗಾರಪ್ಪನವರು ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು. ರೈತರಷ್ಟೇ ಅಲ್ಲ ಅಂದು ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಬಂಗಾರಪ್ಪನವರು ಕೂಡ ಕಾವೇರಿ ಹೋರಾಟಕ್ಕೆ ಇಳಿದಿದ್ದರು.
ಇದೀಗ ಆ ಹೋರಾಟವನ್ನು ನೆನದಿರುವ ರೈತರು, ರಾಜ್ಯ ಸರ್ಕಾರಕ್ಕೂ ಅಂಥದ್ದೆ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಒತ್ತಾಯ ಹಾಕಿದ್ದಾರೆ. ಸುಪ್ರೀಂ ಕೋರ್ಟ್ ಹೇಳಿದಂತೆ ರಾಜ್ಯದಿಂದ ಪ್ರತಿ ದಿನ ಹದಿನೈದು ದಿನದವರೆಗೆ ಐದು ಸಾವಿರ ಕ್ಯೂಸೆಕ್ ನೀರು ಬಿಟ್ಟರೆ ಕುಡಿಯುವ ನೀರಿಗೂ ಕಷ್ಟ ಎದುರಾಗಲಿದೆ.