ಸುದ್ದಿಒನ್ : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಸಂಸತ್ತಿನ ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿತು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ನಾರಿ ಶಕ್ತಿ ವಂದನ್ ಅಧಿನಿಯಮ್ ಎಂಬ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಆಡಳಿತ ವಿರೋಧ ಪಕ್ಷದ ಸದಸ್ಯರ ಸುದೀರ್ಘ ಚರ್ಚೆಯ ನಂತರ ಈ ಮಸೂದೆಯ ಮೇಲೆ ಮತದಾನ ನಡೆಸಿದರು.
ಆಗ ಸದನದಲ್ಲಿ 456 ಸದಸ್ಯರಿದ್ದರು.
ಅದರಲ್ಲಿ 454 ಸಂಸದರು ಈ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದರೆ, ಕೇವಲ ಇಬ್ಬರು ಮಾತ್ರ ಅದರ ವಿರುದ್ಧ ಮತ ಚಲಾಯಿಸಿದರು. ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು.
ಲೋಕಸಭೆಯಲ್ಲಿ ಮಂಡಿಸಿದ ಮೊದಲ ಮಸೂದೆಯನ್ನು ಹೊಸ ಸಂಸತ್ ಭವನದಲ್ಲಿ ಅಂಗೀಕರಿಸಲಾಯಿತು. ಸದನದ 454 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, ಇಬ್ಬರು ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರು.
ಆ ಇಬ್ಬರು ಸಂಸದರು ಎಂಐಎಂ ಪಕ್ಷಕ್ಕೆ ಸೇರಿದವರು ಎಂಬುದು ಗಮನಾರ್ಹ.
ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಮತ್ತೊಬ್ಬ ಸಂಸದ ಇಮ್ತಿಯಾಜ್ ಜಲೀಲ್ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದರು.
ಈ ನಾರಿ ಶಕ್ತಿ ವಂದನ್ ಅಧಿನಿಯಮ್ ಮಸೂದೆ ಮಂಗಳವಾರ ಲೋಕಸಭೆಯ ಮುಂದೆ ಬಂದಿದ್ದು, ಬುಧವಾರ ಚರ್ಚೆ ನಡೆಯಿತು. ಲೋಕಸಭೆಯಲ್ಲಿ ಸುಮಾರು 8 ಗಂಟೆಗಳ ಕಾಲ ಸುದೀರ್ಘ ಚರ್ಚೆಯ ನಂತರ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ನಿರ್ಣಯವನ್ನು ಮಂಡಿಸಿದರು. ನಂತರ ಲೋಕಸಭೆಯ ಸ್ಪೀಕರ್ ಮಹಿಳಾ ಮೀಸಲಾತಿ ವಿಧೇಯಕದ ಮೇಲೆ ಮತಯಾಚನೆ ನಡೆಸಿದರು.
ಮಹಿಳಾ ಮೀಸಲಾತಿ ಮಸೂದೆಯ ಮೇಲೆ ಮತದಾನ ನಡೆಸಲಾಯಿತು.
(ಮ್ಯಾನ್ಯುಯಲ್ ವೋಟಿಂಗ್)
ಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರಿಗೆ ಕೆಂಪು ಮತ್ತು ಹಸಿರು ಬಣ್ಣದ ಚೀಟಿಗಳನ್ನು ನೀಡಲಾಯಿತು. ಬಳಿಕ ಲೋಕಸಭೆಯ ಮಹಾಲೇಖಪಾಲರು ಮತದಾನ ಪ್ರಕ್ರಿಯೆ ಕುರಿತು ಸದಸ್ಯರಿಗೆ ವಿವರಿಸಿದರು.
ಮಸೂದೆಯನ್ನು ಬೆಂಬಲಿಸುವವರು ಹಸಿರು ಬಣ್ಣದ ಚೀಟಿಯಲ್ಲಿ ‘ಎಸ್’ ಎಂದು ಬರೆಯಬೇಕು ಮತ್ತು ಬೆಂಬಲ ಇಲ್ಲದಿದ್ದರೆ ಕೆಂಪು ಬಣ್ಣದ ಚೀಟಿಯಲ್ಲಿ ‘ನೋ’ ಎಂದು ಬರೆಯಬೇಕು. ಬಳಿಕ ಮತದಾನ ಪ್ರಕ್ರಿಯೆ ನಡೆಯಿತು. ಸಾಂವಿಧಾನಿಕ ತಿದ್ದುಪಡಿ ಇರುವುದರಿಂದ ಕೈಯಾರೆ ಮತದಾನ ಮಾಡಲಾಗಿತ್ತು.
1996ರಲ್ಲಿ ಅಂದಿನ ಪ್ರಧಾನಿ ಎಚ್‌ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಈ ಮಸೂದೆಯನ್ನು ಮೊದಲು ಮಂಡಿಸಲಾಗಿತ್ತು. ಹಲವು ಕಾರಣಗಳಿಂದ ಆಡಳಿತಾರೂಢ ಸಮ್ಮಿಶ್ರ ಪಕ್ಷಗಳು ಬೆಂಬಲ ಸೂಚಿಸದ ಕಾರಣ ಅನುಮೋದನೆ ಸಿಗಲಿಲ್ಲ.
ಆದಾಗ್ಯೂ, ಈ ಮಹಿಳಾ ಮೀಸಲಾತಿ ಮಸೂದೆಯು 2010 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಆದರೆ ಲೋಕಸಭೆಯಲ್ಲಿ ಸೋಲಾಯಿತು. ಇದೀಗ ಲೋಕಸಭೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದೆ.
ನಾರಿ ಶಕ್ತಿ ವಂದನ್ ಅಧಿನಿಯಮ್ ಮಸೂದೆಯು ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಒಟ್ಟು ಸ್ಥಾನಗಳಲ್ಲಿ 33 ಪ್ರತಿಶತದಷ್ಟು ಮೀಸಲಾತಿಯನ್ನು ಒದಗಿಸುತ್ತದೆ. ಸಂಸತ್ತು ಈ ಮಸೂದೆಗೆ ಅನುಮೋದನೆ ನೀಡಿದರೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಪ್ರತಿ ಮೂರು ಸದಸ್ಯರಲ್ಲಿ ಒಬ್ಬ ಮಹಿಳೆ ಇರುತ್ತಾರೆ.