ಬೆಂಗಳೂರು: ಇಂದಿರಾ ಕ್ಯಾಂಟೀನ್ ಆರಂಭವಾದ ಮೇಲೆ ಅದೆಷ್ಟೋ ಜನರಿಗೆ ಹೊಟ್ಟೆ ತುಂಬಿದೆ. ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಇಂಥ ಮಹಾನಗರ ಬೆಂಗಳೂರಿನಲ್ಲಿ ಸಿಕ್ಕದರೆ ಅದಕ್ಕಿಂತ ಸಂತಸದ ವಿಚಾರ ಇನ್ನೆಲ್ಲಿರುತ್ತೆ ಹೇಳಿ. ಇದೀಗ ಈ ಯೋಜನೆಯನ್ನು ಕಾಲೇಜು ಮತ್ತು ವಿವಿಗಳಿಗೂ ವಿಸ್ತರಣೆ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ.
ಸಿದ್ದರಾಮಯ್ಯ ಸರ್ಕಾರವಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆ ಹಸಿದವರಿಗೆ ಸುಲಭವಾಗಿ ಅನ್ನ ಸಿಗಲಿ ಎಂಬ ಯೋಜನೆ. ಇದೀಗ ಮತ್ತೆ ಸಿದ್ದರಾಮಯ್ಯ ಸರ್ಕಾರವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆ ಈ ಯೋಜನೆಗೆ ಮತ್ತಷ್ಟು ಮಹತ್ವ ನೀಡಲು ಮುಂದಾಗಿದ್ದಾರೆ.
2017 ರಲ್ಲಿ ಜಾರಿಗೆ ತಂದ ಈ ಯೋಜನೆಯೂ ಇಂದಿಗೂ ಯಶಸ್ವಿಯಾಗಿ ಬಡವರ ಹಸಿವು ನೀಗಿಸುತ್ತಿದೆ. ಯುವ ಪಡೆಯಿಂದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಸರ್ಕಾರಿ ಕಾಲೇಜು, ವಿವಿಗಳಲ್ಲೂ ತರುವಂತೆ ಅಭಿಯಾನ ಆರಂಭವಾಗಿದೆ. ಈ ಅಭಿಯಾನ ಸಿಎಂ ಸಿದ್ದರಾಮಯ್ಯ ಗಮನಕ್ಕೂ ಬಂದಿದ್ದು, ಅಭಿಯಾನ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲನ್ನು ಕೂಡ ಸಿಎಂ ಪರಿಶೀಲನೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ವಿವಿ, ಕಾಲೇಜುಗಳಲ್ಲಿ ಕ್ಯಾಂಟೀನ್ ಅಗತ್ಯತೆಯ ಬಗ್ಗೆ ಪರಿಶೀಲನೆ ಮಾಡಲು ತಿಳಿಸಲಾಗಿದೆ.
ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಕಾಲೇಜು, ವಿವಿಗಳಿಗೆ ಬರುವ ಮಕ್ಕಳು ಸುತ್ತ ಮುತ್ತಲಿನ ಹಳ್ಳಿಗಳಿಂದಾನೇ ಬಂದಿರುತ್ತಾರೆ. ಒಂದು ಹಣದ ಕೊರತೆಯೂ ಇರುತ್ತದೆ, ಮತ್ತೊಂದು ದೂರದೂರುಗಳಿಗೆ ಹೋಗಬೇಕಾಗಿರುತ್ತದೆ. ಹೀಗಾಗಿ ಕಾಲೇಜು ಮತ್ತು ವಿವಿಗಳಲ್ಲಿ ಇಂದಿರಾ ಕ್ಯಾಂಟೀನ್ ಮಾಡಿದರೆ ಸಾಕಷ್ಟು ಮಕ್ಕಳಿಗೆ ಇದರಿಂದ ಪ್ರಯೋಜನವಾಗುವುದಂತು ಸತ್ಯ. ಹೀಗಾಗಿಯೇ ಯುವ ಪಡೆ ಅಭಿಯಾನವನ್ನು ಆರಂಭಿಸಿದೆ.