ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್ 20 : ನಗರದ ಹೊರವಲಯದ ಮೆದೇಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ವಿದ್ಯಾನಗರದಲ್ಲಿ ಪ್ರತಿವರ್ಷವೂ ವಿಜೃಂಭಣೆಯಿಂದ ಗಣಪತಿ ಮಹೋತ್ಸವವನ್ನು ಆಚರಿಸಲಾಗುತ್ತದೆ.
ವಿದ್ಯಾನಗರ ಬಡಾವಣೆಯ ವೀರಸಾವರ್ಕರ್ ಉದ್ಯಾನವನದಲ್ಲಿ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯವರ ಸಹಯೋಗದಿಂದ ಕಳೆದ 15 ವರ್ಷಗಳಿಂದಲೂ ಪ್ರತಿವರ್ಷವೂ ಅತ್ಯಂತ ಸಡಗರ ಸಂಭ್ರಮದಿಂದ ಗಣಪತಿ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಅದರಂತೆ ಈ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಗಣಪತಿ ಮಹೋತ್ಸವ ನೆರವೇರಿತು.
ವಿದ್ಯಾ ನಗರದ ಪ್ರಮುಖ ಆಕರ್ಷಣೆ ಎಂದರೆ ಶ್ರೀ ವಿದ್ಯಾ ಗಣಪತಿ. ನಾವು ಕಳೆದ 15 ವರ್ಷಗಳಿಂದ ಇಲ್ಲಿ ವಿದ್ಯಾ ಗಣಪತಿಯನ್ನು ಪ್ರತಿಷ್ಠಾಪಿಸಿ ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಗಳಿಂದ ಗಣಪತಿಯನ್ನು ಪೂಜಿಸಿ ಆರಾಧಿಸುತ್ತೇವೆ. ಹಾಗೆಯೇ ಮೂರು ದಿನಗಳು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತದೆ.
ವರ್ಷದಿಂದ ವರ್ಷಕ್ಕೆ ಭಕ್ತರು ಅತ್ಯಂತ ಉತ್ಸಾಹದಿಂದ ದೇಣಿಗೆ ನೀಡಿವುದಾಗಲಿ ಮುಂದೆ ನಿಂತು ಮಹೋತ್ಸವದ ಕೆಲಸ ಕಾರ್ಯಗಳನ್ನು ಮಾಡುವುದಾಗಲಿ ತುಂಬಾ ಮುತುವರ್ಜಿಯಿಂದ ಮಾಡುತ್ತಾರೆ. ಇದರಿಂದ ಈ ಉತ್ಸವಕ್ಕೆ ಮತ್ತಷ್ಟು ಮೆರಗು ಬಂದಿದೆ.
ವಿದ್ಯಾ ನಗರದಲ್ಲಿ ವಿಜೃಂಭಣೆಯಿಂದ ನೆರವೇರಿದ ವಿದ್ಯಾಗಣಪತಿ ಮಹೋತ್ಸವ pic.twitter.com/B30uQGYvC8
— suddione-kannada News (@suddione) September 20, 2023
ವಿದ್ಯಾನಗರದ ಜನತೆಯಿಂದ ಮಾತ್ರ ನಾವು ದೇಣಿಗೆಯನ್ನು ಸಂಗ್ರಹಿಸಿ ಬೃಹತ್ ಗಾತ್ರದ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ. ಕಳೆದ ಏಳೆಂಟು ವರ್ಷಗಳಿಂದ ವಿದ್ಯಾನಗರದ ಯುವಕರ ತಂಡ ಅತಿಹೆಚ್ಚು ಆಸಕ್ತಿಯಿಂದ ಈ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ದೇಣಿಗೆ ಸಂಗ್ರಹ, ಉತ್ಸವ ಸಮಿತಿಯ ಕೆಲಸ ಕಾರ್ಯಗಳನ್ನು ಮುತುವರ್ಜಿಯಿಂದ ಮಾಡುವುದರಿಂದ ಮೊದಲಿಗಿಂತಲೂ ವಿಜೃಂಭಣೆಯಿಂದ ಆಚರಿಸುತ್ತೇವೆ.
ಪ್ರತಿ ವರ್ಷವೂ ಸಂಗ್ರಹಿಸಿದ ದೇಣಿಗೆಯ ಖರ್ಚು ವೆಚ್ಚವನ್ನು ಸಮಿತಿಯವರು ಪಾರದರ್ಶಕವಾಗಿ ನಿರ್ವಹಿಸಿ ಉಳಿದ ಹಣದಿಂದ ಈ ವರ್ಷ ರಂಗಮಂದಿರವನ್ನು ನಿರ್ಮಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಈ ಸಮಿತಿಯ ಮೂಲಕ ಮಾಡುತ್ತೇವೆ. ಈ ಮಹೋತ್ಸವವನ್ನು ಇಷ್ಟೊಂದು ಅದ್ದರಿಯಾಗಿ ಆಚರಿಸಲು ಸಹಕರಿಸಿದ ವಿದ್ಯಾನಗರದ ಜನತೆ, ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕರು, ಸದಸ್ಯರು, ಸಮಿತಿಯ ಸದಸ್ಯರು ಸೇರಿದಂತೆ ವಿಶೇಷವಾಗಿ ಯುವಕರ ಪಾತ್ರ ತುಂಬಾ ದೊಡ್ಡದು. ಸಹಕರಿಸಿದ ಎಲ್ಲರಿಗೂ ನಮ್ಮ ಸಂಘ ಮತ್ತು ಸಮಿತಿಯ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ಎಂದು ಪ್ರತಾಪ್ ರೆಡ್ಡಿಯವರು ತಿಳಿಸಿದರು.
ಮೊದಲು ಸಣ್ಣದಾಗಿ ಪ್ರಾರಂಭವಾದ ಈ ಉತ್ಸವ ಇಂದು ಅದ್ದೂರಿಯಾಗಿ ನೆರವೇರಿತ್ತಿದೆ. ವಿದ್ಯಾನಗರದಲ್ಲಿ ವಾಸ ಮಾಡುತ್ತಿರುವ ನಾವೆಲ್ಲರೂ ಒಂದೇ ಕುಟುಂಬ ಎಂಬ ಭಾವನೆಯಿಂದ ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಗಳಿಂದ ಎಲ್ಲರೂ ಸ್ನೇಹಜೀವಿಗಳಾಗಿ ಯಾವುದೇ ಭೇದಭಾವವಿಲ್ಲದೆ ತಾರತಮ್ಯವಿಲ್ಲದೆ ಎಲ್ಲರೂ ಒಂದಾಗಿ ಹಬ್ಬವನ್ನು ಸಂಭ್ರಮದಿಂದ ಈ ಮಹೋತ್ಸವ ಆಚರಿಸುತ್ತೇವೆ. ಇಲ್ಲಿನ ಜನರ ಸಹಕಾರ ಉತ್ತಮವಾಗಿದೆ.ಇವರೆಲ್ಲರ ಅಭೂತಪೂರ್ವ ಬೆಂಬಲದೊಂದಿಗೆ ಈ ಮಹೋತ್ಸವ ಇಷ್ಟು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗುತ್ತಿದೆ ಎಂದು ಜ್ಞಾನಮೂರ್ತಿಯವರು ಹೇಳಿದರು.
ಇಂದು ವಿಸರ್ಜನೆ : ಸೆಪ್ಟೆಂಬರ್ 20 ರಂದು ಮಧ್ಯಾನ್ಹ 1ಗಂಟೆಯ ನಂತರ ಇಲ್ಲಿ ಭಕ್ತರಿಗೆ ಮಹಾ ಅನ್ನ ಸಂತರ್ಪಣೆ ನೆರವೇರಿಸಲಾಗುವುದು. ನಂತರ ಪೂಜಾವಿಧಿವಿಧಾನಗಳನ್ನು ನೆರವೇರಿಸಿ ವಿದ್ಯಾ ನಗರದ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಂಚರಿಸಿ ಸಂಜೆ ಆರು ಗಂಟೆ ವೇಳೆಗೆ ಮೂರ್ತಿಯನ್ನು ಕೆರೆ ಸಮೀಪದಲ್ಲಿ ಮೆದೇಹಳ್ಳಿ ಗ್ರಾಮ ಪಂಚಾಯತಿಯವರು ನಿರ್ಮಿಸಿರುವ ತೊಟ್ಟಿಯಲ್ಲಿ ಶ್ರದ್ದಾ ಭಕ್ತಿಯಿಂದ ಪೂಜೆ ಸಮರ್ಪಿಸಿ ಕ್ರೇನ್ ಮೂಲಕ ವಿಸರ್ಜನೆ ಮಾಡಲಾಗುತ್ತದೆ ಎಂದು ಸಮಿತಿಯವರು ತಿಳಿಸಿದ್ದಾರೆ.