ನವದೆಹಲಿ: ಕಾವೇರಿಗಾಗಿ ರೈತರು ಮಂಡ್ಯದಲ್ಲಿ ಇನ್ನು ಪ್ರತಿಭಟನೆ ನಡೆಸುತ್ತಲೆ ಇದ್ದಾರೆ. ಈ ಮಧ್ಯೆ ತಮಿಳುನಾಡಿಗೆ ಪ್ರತಿ ದಿನ ನೀರು ಬಿಡಲೇಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತೆ ಆದೇಶ ಹೊರಡಿಸಿದೆ. ಇದು ರೈತರನ್ನು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿದೆ. ರಾಜ್ಯ ಸರ್ಕಾರದ ಮೇಲೆ ರೈತರು ಕೋಪಗೊಂಡಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಕಾವೇರಿ ನೀರು ಉಳಿಸುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಚರ್ಚೆ ಮಾಡಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಕರ್ನಾಟಕದ ಎಲ್ಲಾ ಸಂಸದರು ಹಾಗೂ ಕೇಂದ್ರ ಸಚಿವರ ಜೊತೆಗೆ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಸ್ಥಗಿತಗೊಂಡಿರುವ ಹಲವಾರು ಯೋಜನೆಗಳು ಹಾಗೂ ಕೇಂದ್ರದ ಅನುಮತಿಗಾಗಿ ಕಾಯುತ್ತಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.
ದೆಹಲಿಯ ಖಾಸಗಿ ಹೊಟೇಲ್ ನಲ್ಲಿ ಸಭೆ ಸೇರಿದ್ದಾರೆ. ಸಂಸದರು, ಸಚಿವರು, ಶಾಸಕರು ಮತ್ತು ಕೇಂದ್ರ ಸಚಿವರೊಂದಿಗೆ ಸಭೆ ಆರಂಭವಾಗಿದೆ. ಚಲುವರಾಯಸ್ವಾಮಿ, ಶಾಸಕ ಬಂಡಿಸಿದ್ದೇಗೌಡ, ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ, ಸಂಸದರಾದ ಗದ್ದಿಗೌಡರ್, ಲೆಹರ್ ಸಿಂಗ್, ಪ್ರಿಂಟ್ ನಾರಾಯಣ, ಬಚ್ಚೇಗೌಡ, ಶೋಭಾ ಕರಂದ್ಲಾಜೆ, ನಾರಯಣಸ್ವಾಮಿ, ಡಿ.ವಿ ಸದಾನಂದಗೌಡ, ತೇಜಸ್ವಿ ಸೂರ್ಯ, ಈರಣ್ಣ ಕಡಾಡಿ, ಸುಮಲತಾ ಅಂಬರೀಶ್, ಜಿ.ಎಸ್ ಬಸವರಾಜು, ರಾಜಾ ಅಂಬರೀಶ್ ನಾಯಕ್, ಜಿ.ಸಿ ಚಂದ್ರಶೇಖರ್, ರಮೇಶ್ ಜಿಗಜಿಣಗಿ, ನಟ ಜಗ್ಗೇಶ್, ಡಾ.ಎಲ್ ಹನುಮಂತಯ್ಯ, ಮಂಗಳಾ ಅಂಗಡಿ, ಮುನಿಸ್ವಾಮಿ, ಹೆಚ್.ಕೆ ಪಾಟೀಲ್, ಮಹದೇವಪ್ಪ ಆಗಮಿಸಿದ್ದಾರೆ. ಅಲ್ಲದೇ ಸಂಸದ ಉಮೇಶ್ ಜಾದವ್, ಶಿವಕುಮಾರ್ ಉದಾಸಿ, ಕೇಂದ್ರ ಸಚಿವ ಭಗವಂತ್ ಖೂಬಾ, ಸಂಸದ ಡಿ.ಕೆ ಸುರೇಶ್, ಸುಪ್ರೀಂಕೋರ್ಟ್ನ ಹಿರಿಯ ವಕೀಲ ಮೋಹನ್ ಕಾತರಗಿ ಸೇರಿದಂತೆ ಹಲವು ವಕೀಲರು ಕೂಡ ಸಭೆಗೆ ಆಗಮಿಸಿದ್ದಾರೆ.
ತಮಿಳುನಾಡಿಗೆ ಇನ್ನು ಹದಿನೈದು ದಿನಗಳ ಕಾಲ ಪ್ರತಿದಿನ 5 ಕ್ಯೂಸೆಕ್ ನೀರನ್ನು ಬಿಡಬೇಕು ಎಂದು ಆದೇಶ ಹೊರಡಿಸಿದೆ. ಈ ಹಿನ್ನೆಲೆ ಇಂದಿನ ಸಭೆ ಮಹತ್ವ ಪಡೆದಿದೆ. ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ಮೋದಿಯವರಿಗೆ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಲಾಗುವುದು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರ ಭೇಟಿಗೂ ಕಾಲಾವಕಾಶ ಕೇಳಿದ್ದಾರೆ.
ಕಾವೇರಿ ವಿಚಾರದಲ್ಲಿ ಕರ್ನಾಟಕದ ಸಂಸದರು, ಸಚಿವರು ಒಂದಾಗಬೇಕಾದ ಅನಿವಾರ್ಯತೆ ಇದೆ. ಕೆಆರ್ಎಸ್ ನಲ್ಲಿ ನೀರು ಕೂಡ ಖಾಲಿಯಾಗುತ್ತಾ ಇದೆ. ನಮ್ಮ ರಾಜ್ಯಕ್ಕೆ ನೀರಿಲ್ಲ. ಹೀಗಿರುವಾಗ ಪಕ್ಕದ ರಾಜ್ಯಕ್ಕೆ ಪ್ರತಿದಿನ ನೀರು ಬಿಟ್ಟರೆ, ಬೆಂಗಳೂರಿನ ಮಂದಿ ಒಂದು ದಿನ ಕುಡಿಯುವುದಕ್ಕೂ ನೀರಿಲ್ಲದೆ ಒದ್ದಾಡುವಂತೆ ಆಗುತ್ತದೆ. ಹೀಗಾಗಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.